ಸುರಪುರ: ರಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಬೆಳಗ್ಗೆ 11:00 ಗಂಟೆಗೆ ತಾಲೂಕು ವೀರಶೈವ ಲಿಂಗಾಯತ ಸಮಿತಿಯ ವಾರ್ಷಿಕ ಮಹಾಸಭೆ ಏರ್ಪಡಿಸಲಾಗಿದೆ ಎಂದು ವೀರಶೈವ ಸಮಿತಿ ತಾಲೂಕು ಅಧ್ಯಕ್ಷ ಡಾ| ಸುರೇಶ ಸಜ್ಜನ್ ತಿಳಿಸಿದರು.
ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ವಾರ್ಷಿಕ ಮಹಾಸಭೆ ನಿಮಿತ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ಬಾಂಧವರ ಪ್ರೀತಿ, ವಾತ್ಸಲ್ಯ ಮತ್ತು ಸಹಕಾರದಿಂದ ತಾಲೂಕು ವೀರಶೈವ-ಲಿಂಗಾಯತ ಸಮಿತಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಹೆಮ್ಮರವಾಗಿ ಬೆಳೆದಿದೆ. ನೋಂದಣಿಯಾದಗಿನಿಂದ ಇಲಿಯವರೆಗೆ ಸಮಿತಿ ಪ್ರಗತಿ ಮತ್ತು ಅಭಿವೃದ್ಧಿ ಬಗ್ಗೆ ಸಮಾಜದ ಜನರಿಗೆ ತಿಳಿಸುವ ಮತ್ತು 2018-19 ಸಾಲಿನ ಖರ್ಚು ವೆಚ್ಚಕ್ಕೆ ಒಪ್ಪಿಗೆ ಹಾಗೂ ಅಡಾವೆ ಪತ್ರಕ್ಕೆ ಅನುಮೋಧನೆ ಪಡೆಯುವ ಉದ್ದೇಶದಿಂದ ಮಹಾ ಸಭೆ ಕರೆಯಲಾಗಿದೆ ಎಂದರು.
60 ಲಕ್ಷ ವೆಚ್ಚದಲ್ಲಿ ಕಲ್ಯಾಣ ಮಂಟಪ, ಒಂದು ಕೋಟಿ ವೆಚ್ಚದಲ್ಲಿ ಅನ್ನಪೂಣೇಶ್ವರಿ ದಾಸೋಹ ಮಂಟಪ, ಅಡುಗೆ ಕೋಣೆ, ಉಚಿತ ಪ್ರಸಾದ ನಿಲಯ ಬಸವೇಶ್ವರ ಪತ್ತಿನ ಸಹಕಾರಿ ಸಂಘ ಮತ್ತು 4 ಶಾಖೆಗಳ ಸ್ಥಾಪನೆಯೊಂದಿಗೆ 20 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಪ್ರಾಥಮಿಕ ಶಾಲೆ. ಐಟಿಐ ಕಾಲೇಜು, ಬಿಸಿಊಟ ಸೇರಿದಂತೆ ಹತ್ತಾರು ಸಂಸ್ಥೆಗಳನ್ನು ಆರಂಭಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಸಮಿತಿ ಎಲ್ಲಾ ಸದಸ್ಯರ ಸಹಾಯ ಸಹಾರದಿಂದ ಇವತ್ತು 20 ಕೋಟಿ ಮೌಲ್ಯದ ಚಿರಾಸ್ತಿ ಹೊಂದಿರುವುದು ಸಮಿತಿಯ ಬಹುದೊಡ್ಡ ಸಾಧನೆಯಾಗಿದೆ. ಸಮಿತಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಇದಕ್ಕೆ ಸಮಾಜ ಬಾಂಧವರ ಸಹಕಾರವೇ ಮೂಲ ಕಾರಣ. 2006ರಿಂದ 2018-19ರ ವರೆಗೆ ಸಮಿತಿಯ ಜಮಾ ಖರ್ಚಿನ ವಿವರವನ್ನು ಪ್ರಥಮ ಬಾರಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಹೀಗೆ ಪ್ರತಿ ವರ್ಷವು ಬಸವ ಜಯಂತಿ ಪೂರ್ವದಲ್ಲಿ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಈ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ಸಮಿತಿಯ ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಬಸನಗೌಡ ಯಡಿಯಾಪುರ, ಮುಖಂಡರಾದ ಸೋಮಶೇಖರ ಶಾಬಾದಿ, ವೀರಪ್ಪ ಅವಂಟಿ, ಎಸ್.ಎಂ. ಕನಕರಡ್ಡಿ, ಜಿ.ಎಸ್. ಪಾಟೀಲ, ಸೂಗುರೇಶ ವಾರದ, ಮನೋಹರ ಜಾಲಹಳ್ಳಿ, ಶಿವಶರಣಪ್ಪ ಹೆಡಗಿನಾಳ, ಸಂಗಣ್ಣ ಎಕ್ಕೆಳ್ಳಿ, ಶರಣಪ್ಪ ಕಲಕೇರಿ ಇದ್ದರು.