ಸುರಪುರ: ನಗರದಲ್ಲಿ ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂದು ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಶಾಂತಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಧರ್ಮದ ಹಬ್ಬದ ಹಿಂದೆ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಹಬ್ಬ ಹರಿದಿನಗಳಿಗೆ ಅರ್ಥ ಬರುತ್ತದೆ. ಹೀಗಾಗಿ ಹೋಳಿ ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯಿಂದ ಆಚರಿಸಬೇಕು ಎಂದು ಹೇಳಿದರು.
ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಮತ್ತು ಕೊರೊನಾ ವೈರಸ್ ಆತಂಕ ಇರುವುದರಿಂದ ಯುವಕರು ಎಚ್ಚರಿಕೆಯಿಂದ ಬಣ್ಣ ಆಡಬೇಕು. ಒತ್ತಾಯ, ಬಲವಂತದಿಂದ ಬಣ್ಣ ಹಾಕುವುದು ಸರಿಯಲ್ಲ, ಬಣ್ಣ ಎರಚುವ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು ಅಪರಾಧ ಎಂದರು.
ವೆಂಕೋಬ ದೊರೆ, ಉಸ್ತಾದ್ ವಜಾಹತ್ ಹುಸೇನ್, ವೆಂಕಟೇಶ ಬೇಟೆಗಾರ, ವೆಂಕಟೇಶ ನಾಯಕ ಬೈರಿಮರಡಿ, ಶಿವಲಿಂಗ ಚಲುವಾದಿ, ರಾಹುಲ್ ಹುಲಿಮನಿ, ಎಂ. ಪಟೇಲ್ ಇತರರು ಮಾತನಾಡಿ, ಸುರಪುರದಲ್ಲಿ ಪ್ರತಿಯೊಂದು ಹಬ್ಬಗಳು ಭಾವೈಕ್ಯತೆಯಿಂದ ನಡೆಯುತ್ತಿವೆ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಉದಾಹರಣೆ ಇಲ್ಲ. ಅದಕ್ಕೆ ಯಾರೊಬ್ಬರು ಸಹ ಅವಕಾಶ ನೀಡುವುದಿಲ್ಲ. ಪರಸ್ಪರ ಶಾಂತಿ-ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತವೆ. ಸಣ್ಣ ಪುಟ್ಟ ಘಟನೆಗಳಿದ್ದಲ್ಲಿ ಆಯಾ ಧರ್ಮಗಳ ಮುಖಂಡರು ತಿಳಿ ಹೇಳಿ ಸಮಸ್ಯೆಯಾಗದಂತೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ದಾನಪ್ಪ ಕಡಿಮನಿ, ನಿಂಗಣ್ಣ ಗೋನಾಳ, ರಾಮಣ್ಣ ಶೆಳ್ಳಗಿ, ಬಸವಲಿಂಗಪ್ಪ ಐನಾಪುರ, ದೇವಿಂದ್ರಪ್ಪ ಬಳಿಚಕ್ರ, ಎಂ. ಪಾಶಾ, ವೆಂಕಟೇಶ ಅಮ್ಮಾಪುರ, ಮಲ್ಲೇಶಿ ಪೂಜಾರಿ ಸೇರಿದಂತೆ ಇನ್ನಿತರರಿದ್ದರು. ಪಿಎಸ್‌ಐಗಳಾದ ಚೇತನ ಕುಮಾರ, ಚಂದ್ರಶೇಖರ ನಾರಾಯಣಪುರ ವೇದಿಕೆಯಲ್ಲಿದ್ದರು. ಮುಖ್ಯ ಪೇದೆ ಮಂಜುನಾಥ ಸ್ವಾಮಿ ಸ್ವಾಗತಿಸಿದರು. ಮಹಾಂತೇಶ ಬಿರಾದಾರ ನಿರೂಪಿಸಿದರು. ಶರಣುಗೌಡ ವಂದಿಸಿದರು.