Advertisement

ಸುರಪುರ ಯುವತಿ ಮೋನಿಕಾಗೆ ರಾಜಸ್ಥಾನದಲ್ಲಿ ಸನ್ಯಾಸ ದೀಕ್ಷೆ

11:39 AM Feb 06, 2020 | Naveen |

ಸುರಪುರ: ನಗರದ ಜೈನ್‌ ಸಮುದಾಯದ ಮೋನಿಕಾ ಭರತಕುಮಾರ ಜೈನ್‌ ಸನ್ಯಾಸ ಸ್ವೀಕಾರ ಪ್ರಕ್ರಿಯೆ ರಾಜಸ್ಥಾನದಲ್ಲಿ ಇತ್ತೀಚೆಗೆ ವಿದ್ಯುಕ್ತವಾಗಿ ನಡೆಯಿತು.

Advertisement

ರಾಜಸ್ಥಾನದ ಜಾಲೂರು ಜಿಲ್ಲೆ ಬಾಕ್ರಾರೋಡ್‌ ತಾಲೂಕು ಚಮತ್ಕಾರಿ ಭಗವಾನ ಪಾಶ್ವನಾಥ ಜೈನ್‌ ಮಂದಿರಲ್ಲಿ ಜೈನ್‌ ಧರ್ಮದ ವಿಧಿ ವಿಧಾನಗಳೊಂದಿಗೆ ವಿದುಷಿ ಮಣಿ ಪ್ರಭಾಶ್ರೀಜೀ ಸನ್ಯಾಸ ದೀಕ್ಷೆ ನೀಡಿದರು.

ಸನ್ಯಾಸ ಸ್ವೀಕಾರ ಅಂಗವಾಗಿ ಕಳೆದ ಒಂದು ತಿಂಗಳಿಂದ ನಗರದಲ್ಲಿ ಜೈನ್‌ ಸಮುದಾಯದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಜ.10ರಂದು ನಗರದ ಸೂಗುರೇಶ್ವರಜೀ ಗುರು ಮಂದಿರದ ಆವರಣದಲ್ಲಿ ದೀಕ್ಷಾರ್ಥಿ ಮೋನಿಕಾ ಪೂರ್ವಶ್ರಮದ ಎಲ್ಲ ವಿಧಿವಿಧಾನ ನೆರವೇರಿಸಿ ಸನ್ಯಾಸ ಸ್ವೀಕಾರಕ್ಕೆ ಅಣಿಯಾಗಿದ್ದರು.

ಫೆ. 1ರಂದು ರಾಜಸ್ಥಾನದಲ್ಲಿ ವಿದುಷಿ ಮಣಿ ಪ್ರಭಾಶ್ರೀಜಿ ಸನ್ನಿಧಾನದಲ್ಲಿ ಸನ್ಯಾಸ ಸ್ವೀಕರಿಸಿದರು. ಸನ್ಯಾಸ ಪೂರ್ವದಲ್ಲಿಯೇ ಮೋನಿಕಾ ವಿದುಷಿ ಮಣಿ ಪ್ರಭಾಶ್ರೀಜಿ ಅವರೊಂದಿಗೆ 2750 ಕಿಮೀ ಸಂಚಾರ ಮಾಡಿ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಜ. 25ರಂದು ಬಂಧು ಬಾಂಧವರು, ಸಮುದಾಯದವರು ಮೋನಿಕಾಳಿಗೆ ಕೊನೆ ಕೈ ತುತ್ತು ಉಣಿಸಿ ಅಂತಿಮ ವಿದಾಯ ಹೇಳಿ ನಗರದಿಂದ ಬೀಳ್ಕೊಟ್ಟಿದ್ದರು. ಸನ್ಯಾಸ ಸ್ವೀಕಾರಕ್ಕಾಗಿ ಮೋನಿಕಾ ಕಲಬುರಗಿಯಿಂದ ರೈಲು ಮಾರ್ಗವಾಗಿ ಸಮುದಾಯದ ಸಂಪ್ರದಾಯದಂತೆ ತಂದೆ ಮತ್ತು ಅಣ್ಣ ಜತೆಯಲ್ಲಿ ರಾಜಸ್ಥಾನಕ್ಕೆ ತಲುಪಿದ್ದರು. ಭಾಕ್ರಾರೋಡ್‌ ಭಗವಾನ ಪಾರ್ಶ್ವನಾಥ ಜೈನ್‌ ಮಂದಿರಲ್ಲಿ ಸನ್ಯಾಸ ಸ್ವೀಕಾರಕ್ಕೆ ಸಕಲ ಏರ್ಪಾಟು ಮಾಡಲಾಗಿತ್ತು.

Advertisement

ಜ. 30ರಂದು ದೀಕ್ಷಾರ್ಥಿ ಮೋನಿಕಾ ಭಗವಾನ ಮಹಾವೀರ ಮಹಾರಾಜ ಮತ್ತು ಭಗವಾನ ಪಾಶ್ವನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿದುಷಿ ಮಣಿ ಪ್ರಭಾಶ್ರೀಜೀ ಮಾರ್ಗದರ್ಶನದಲ್ಲಿ ವಿಧಿ ವಿಧಾನ ನೆರವೇರಿಸಿ ಪೂರ್ವಾಶ್ರಮದ ಎಲ್ಲ ಸಂಬಂಧ ಕಳಚಿಕೊಂಡರು. 31ರಂದು ಚಮತ್ಕಾರಿ ಪಾಶ್ವನಾಥನಿಗೆ ವಿಶೇಷ ಪೂಜೆ ಧಾರ್ಮಿಕ ಕಾರ್ಯಗಳು ನಡೆದವು. ಫೆ. 1ರಂದು ಬೆಳಗ್ಗೆ ಬ್ರಾಹ್ಮೀ ಮೂರ್ತದಲ್ಲಿ ಮೋನಿಕಾಳಿಗೆ ಕೇಶಲೋಚನ, ನಂತರ ಶ್ವೇತ ವರ್ಣದ ಕೌಫೀನ್‌ ಧಾರಣೆ ಮಾಡಿಸಲಾಯಿತು. ಭಗವಾನ ಮಹಾವೀರ ಮಹಾರಾಜರು ಬೋಧಿಸಿದ ಧರ್ಮ ಪ್ರಶೀದಂತು ಮಂತ್ರೋಪದೇಶ ಬೋಧಿಸಲಾಯಿತು. ನಂತರ ವಿದುಷಿ ಮಣಿ ಪ್ರಭಾಶ್ರೀಜಿ ಧರ್ಮ ದಂಡದೊಂದಿಗೆ ಸನ್ಯಾಸ ದೀಕ್ಷೆ ನೀಡಿದರು.

ನಂತರ ಮೋನಿಕಾಳಿಗೆ ತೊಟ್ಟಿಲೋತ್ಸವ ನೆರವೇರಿಸಿ ವಿದುಷಿ ಬಿಬೂಯಶ ಶ್ರೀಜೀ ಎಂಬ ನೂತನ ನಾಮಕರಣ ಮಾಡಿದರು. ನಂತರ ಕಮಂಡಲ, ಭಿಕ್ಷೆ ಪಾತ್ರೆ ನೀಡಿ ಧರ್ಮಯಾತ್ರೆಗೆ ಬೀಳ್ಕೊಟ್ಟರು ಇದರೊಂದಿಗೆ ಸನ್ಯಾಸ ಸ್ವೀಕಾರ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next