ಸುರಪುರ: ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ಕೊಡಬೇಕು. ಕಾಮಗಾರಿ ಆರಂಭಿಸದಿದ್ದಲ್ಲಿ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಬೋನಾಳ, ಆಲ್ದಾಳ, ನಾಗರಾಳ ಗ್ರಾಮದ ಕೂಲಿಕಾರರು ತಾಲೂಕು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಶುಕ್ರವಾರ ತಾಪಂ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್ ನೇತೃತ್ವವಹಿಸಿ ಮಾತನಾಡಿ, ನೆರೆ ಪ್ರವಾಹದಿಂದ ಬೆಳೆ ನಾಶವಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಇತ್ತ ಉದ್ಯೋಗ ಖಾತ್ರಿ ಯೋಜನೆಯೂ ಆರಂಭಿಸುತ್ತಿಲ್ಲ. ಇದರಿಂದ ಕೂಲಿಕಾರರು ಕೆಲಸವಿಲ್ಲದೇ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಗುಳೆ ತಪ್ಪಿಸಲು ಸರಕಾರ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಖಾತ್ರಿ ಯೋಜನೆ ಆರಂಭಿಸುತ್ತಿಲ್ಲ. ಕೆಲಸ ನೀಡದಿದ್ದರೆ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡುವ ನಿಯಮವಿದೆ. ಆದರೆ ಇದುವರೆಗೆ ಯಾವೊಬ್ಬ ಕಾರ್ಮಿಕರಿಗೆ ಭತ್ಯೆ ನೀಡಿಲ್ಲ. ಕೂಡಲೇ ಕಾರ್ಮಿಕರ ಖಾತೆಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಲ್ದಾಳ, ಬೋನಾಳ ಗ್ರಾಮಗಳ ಕೂಲಿಕಾರರು ಫಾರಂ 6 ಕಾಮಗಾರಿಗಾಗಿ ಅರ್ಜಿ ಸಲ್ಲಿಸಿದರೂ ಕೆಲಸ ನೀಡುತ್ತಿಲ್ಲ. ನಿರ್ಲಕ್ಷ್ಯ ವಹಿಸುತ್ತಿರುವ ಆಲ್ದಾಳ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಲಿಕಾರರ ಸಕಲರಣೆ ಬಾಡಿಗೆ ಕೊಡಬೇಕು. ಪ್ರತಿ ಗ್ರಾಪಂನಲ್ಲಿ ಯೋಜನೆಯಡಿ ಇಟ್ಟಂಗಿ ಭಟ್ಟಿ, ನರ್ಸರಿ ಬೆಳೆಸಲು ಕ್ರಿಯಾ ಯೋಜನೆ ರೂಪಿಸಬೇಕು. ಈ ಬಗ್ಗೆ ತಾಪಂ ಇಒ ಗಮನಹರಿಸಿ ಕಾಮಗಾರಿ ಆರಂಭಿಸಲು ಅನುಕೂಲ ಮಾಡಿಬೇಕೆಂದು ಆಗ್ರಹಿಸಿದರು.
ಫಾರಂ 6 ಭರ್ತಿ ಮಾಡಬೇಕು. ಕಾಮಗಾರಿಗೆ ಸಂಬಂಧಿಸಿದಂತೆ ಎನ್‌ಎಂಆರ್ ತೆಗೆದುಕೊಳ್ಳಬೇಕು. ಕಾರ್ಮಿಕರು ಅನಕ್ಷರಸ್ಥರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಪರಿಶೀಲಿಸಿ ಜಾಬ್ ಕಾರ್ಡ್ ವಿತರಿಸಬೇಕು. ಇದನ್ನು ಸರಿಯಾಗಿ ನಿರ್ವಹಿಸದ ಪಿಡಿಒಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರು ತಾಪಂ ಇಒ ಜಗದೇವ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ಕೃಷಿ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕರ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷೆ ಲಕ್ಷ್ಮೀ ಅನುಸೂರ, ಸಂಚಾಲಕ ಖಾಜಾಸಾಬ್ ಎಂ. ಬೋನಾಳ, ಶರಣಪ್ಪ ಅನಸೂರು, ಕಾರ್ಯದರ್ಶಿಗಳಾದ ರಾಜು ದೊಡ್ಡಮನಿ, ಶರಣಪ್ಪ ಜಂಬಲದಿನ್ನಿ ಇತರರಿದ್ದರು.