Advertisement

ಕುಡಿಯುವ ನೀರಿನ ಸಮಸ್ಯೆಗಿಲ್ಲ ಮುಕ್ತಿ

11:03 AM Aug 31, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ:
ಸಾರ್ವಜನಿಕರಿಗೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಬದಿಯಲ್ಲಿಯೇ ಮೂತ್ರ ವಿಸರ್ಜನೆ, ನಗರದ ಪ್ರಮುಖ ಬೀದಿಗಳೆಲ್ಲ ತಗ್ಗು ಗುಂಡಿಗಳಾಗಿರುವ ರಸ್ತೆಗಳು ಇದು ಸುರಪುರ ನಗರದ ಪ್ರಸ್ತುತ ಚಿತ್ರಣ.

Advertisement

ನಗರಸಭೆಗೆ ಜನಪ್ರತಿನಿಧಿಗಳು ಆಯ್ಕೆಯಾಗಿ ಒಂದು ವರ್ಷ ಕಳೆದರೂ ಅಧ್ಯಕ್ಷರ, ಉಪಾಧ್ಯಕ್ಷರ ನೇಮಕವಾಗಿಲ್ಲ. ಮೀಸಲಾತಿ ಆಯ್ಕೆಪಟ್ಟಿಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಕೆಲ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ನ್ಯಾಯಾಲಯ ಮೊರೆ ಹೋಗಿದ್ದರಿಂದ ಕೆಲ ಜಿಲ್ಲೆ, ತಾಲೂಕಿನಲ್ಲಿ ನಗರಸಭೆ, ಪುರಸಭೆಗಳಿಗೆ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವಾಗಿಲ್ಲ. ಹೀಗಾಗಿ ಇಲ್ಲಿಯ ನಗರಸಭೆಗೆ ಸ್ಥಿತಿ ಮಾಲೀಕನಿಲ್ಲದ ಮನೆಯಂತಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಆದಾಗಿನಿಂದಲೂ ಶಾಸಕರು ರಾಜಕೀಯ ಚಟುವಟಿಕೆಗಳಲ್ಲಿ ನಿರತರವಾಗಿದ್ದಾರೆ. ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಿಂದ ಕ್ಷೇತ್ರದತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಬೇಕಾಬಿಟ್ಟಿ ಆಡಳಿತಕ್ಕೆ ಕಾರಣವಾಗಿದೆ. ನಗರಸಭೆ ಆಡಳಿತ ಯಂತ್ರ ಅತಂತ್ರವಾಗಿರುವ ಕಾರಣ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಅಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ನಗರದಲ್ಲಿ ಒಂದು ವರ್ಷ ಕಳೆದರೂ ಹೊಸ ಯೋಜನೆಗಳು ಜಾರಿಗೊಂಡಿಲ್ಲ. ಹಳೆ ಯೋಜನೆಗಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿವೆ. ಮಳೆಗಾಲ ಮುಗಿಯುತ್ತಾ ಬಂದರು ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ತಪ್ಪಿಲ್ಲ. ತಿಂಗಳಿಂದ ನೀರು ಸರಬರಾಜು ನಿಂತು ಹೋಗಿದೆ. ಪ್ರವಾಹಕ್ಕೆ ತುತ್ತಾಗಿ ಸುಟ್ಟು ಹೋಗಿರುವ ನೀರು ಸರಬರಾಜು ಯಂತ್ರಗಳು ಇದುವರೆಗೂ ದುರಸ್ತಿ ಕಾಣುತ್ತಿಲ್ಲ.

ಚರಂಡಿಯಲ್ಲಿ ಹರಿಯದ ನೀರು: ನಗರದ ಜನತಾ ಕಾಲೋನಿ, ಶೆಟ್ಟಿ ಓಣಿ, ಭೋವಿ ಗಲ್ಲಿ, ಕಬಾಡಾಗೇರಿ, ದಖನಿ ಮೊಹಲ್ಲ, ಗಾಂಧಿ ನಗರ, ಕುಂಬಾರಪೇಟೆ, ವೆಂಕಟಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿಲ್ಲ. ಇದರಿಂದ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಗ್ಗು ಗುಂಡಿಗಳಲ್ಲಿ ಸಂಚಾರ: ನಗರಸಭೆಯಾಗಿ ಮಾರ್ಪಟ್ಟಿದ್ದರೂ ನಗರ ಎನ್ನುವ ಯಾವ ಲಕ್ಷಣಗಳು ಗೋಚರವಾಗುತ್ತಿಲ್ಲ. ಒಳಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳು ಇದುವರೆಗೂ ರಿಪೇರಿ ಕಂಡಿಲ್ಲ. ಸಂಚರಿಸಲು ಗುಣಮಟ್ಟದ ರಸ್ತೆಗಳಿಗಿಲ್ಲ. ಆಟೋ, ಬೈಕ್‌ ಸವಾರರು ಸವಾರಿಗೆ ಸಂಕಟ ಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next