ಸುರಪುರ: ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆ ಜಿಲ್ಲಾಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ, ನಗರಸಭೆಯಲ್ಲಿ ಭಾರಿ ಪ್ರಾಮಾದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸಾರ್ವಜನಿಕರ ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಏನಾದರು ದಾಖಲೆ ತೆಗೆದುಕೊಳ್ಳಬೇಕಾದರೆ ಲಂಚ ಕೊಡಲೆಬೇಕು. ಹಣ ಕೊಡದಿದ್ದರೆ ಕೆಲಸ ಕಾರ್ಯಗಳೇ ಆಗುವುದಿಲ್ಲ. ಈ ಬಗ್ಗೆ ಸೇನೆ ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕೆಲ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬಂದರೆ ಅಧಿಕಾರಿಗಳು ಸಿಗುವುದಿಲ್ಲ. ಮನೆಗೆ ಸಂಬಂಧಿಸಿದ ದಾಖಲಾತಿಗಳನ್ನು ಸರಿಯಾಗಿ ನಮೂದಿಸುತ್ತಿಲ್ಲ. ಲಂಚ ಪಡೆದು ಯಾರದೋ ಆಸ್ತಿ ಇನ್ಯಾರದೋ ಹೆಸರಲ್ಲಿ ವರ್ಗಾಯಿಸಿ ಬಿಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಜನರನ್ನೇ ಗದರಿಸುತ್ತಿದ್ದಾರೆ ಎಂದು ದೂರಿದರು.
ರಾಹುಲ್ ಹುಲಿಮನಿ ಮಾತನಾಡಿ, ನಗರಸಭೆಯಲ್ಲಿ ಬಹುತೇಕವಾಗಿ ಸ್ಥಳೀಯರೇ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸುಮಾರು ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ರಾಜಕೀಯ ಪ್ರಭಾವ ಹೊಂದಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕರ ವಸೂಲಿಗಾರರು ಸೇರಿದಂತೆ ಎಲ್ಲರು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಅವರ ನಿರ್ಲಕ್ಷ್ಯದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದರು
ದಿವಳಗುಡ್ಡ ವಾರ್ಡ್‌ನ ಸರ್ವೆ ನಂ. 2/122 ಪ್ಲಾಟ್‌ನಂ 10 ನಿವೇಶನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತಕರಾರು ಇದೆ. ಕೆಲವರು ಅನಧಿಕೃತವಾಗಿ ಜಾಗ ಕಬಳಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮಾನವಿ ಮಾಡಿದರು ಕೂಡ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನರಿಗಾಗುತಿರುವ ತೊಂದರೆ ನಿವಾರಿಸುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಮಗ್ರ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಬೇಕು. ದಿವಳಗುಡ್ಡ ಹತ್ತಿರದ ನಿವೇಶನ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಇತ್ಯರ್ಥ ಪಡಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾಸುಲ್ತಾನ್ ಅವರಿಗೆ ಸಲ್ಲಿಸಿದರು.
ಸೇನೆ ಪ್ರಮುಖರಾದ ಬಸವರಾಜ ಹಳ್ಳಿ, ಹುಲಗಪ್ಪ ದೇವತ್ಕಲ್, ತಾಯಪ್ಪ ಕನ್ನೆಳ್ಳಿ, ಶಿವಣ್ಣ ನಾಗರಾಳ, ಭೀಮರ್ನಣ ಬಲಶೆಟ್ಟಿಹಾಳ, ರಮೇಶ ನಂಬಾ, ಪರಮಣ್ಣ ಹಂದ್ರಾಳ,ಸುರೇಶ ಅಮ್ಮಾಪುರ, ಜಗದೀಶ ಯಕ್ತಾಪುರ, ನಾಗರಾಜ ಗೋಗಿಕೆರಾ, ದೇವಪ್ಪ ಭಜಂತ್ರಿ, ದೇವಪ್ಪ ಹೊಸ್ಮನಿ ಇದ್ದರು.