Advertisement
ಬದುಕು ಮತ್ತು ಬರಹ, ಕಾವ್ಯ ಮತ್ತು ಸ್ಪಂದನ, ಕೃತಿ ಮತ್ತು ಕೃಷಿಗಳ ಒಟ್ಟು ಸ್ವರೂಪವಾಗಿ ‘ಸುರಗಂಗೆ’ ಮೂಡಿಬಂದಿದೆ. ಅವರ ಸಂವೇದನೆಯೇ ಇಲ್ಲಿ ಬರಹಗಳ ಮೂರ್ತರೂಪವೆತ್ತಿವೆ. ಕನ್ನಡ ಮಲಯಾಳಂ ಒಳಗೊಂಡು ಪಂಚ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಪಾರ್ವತಿ ಜಿ. ಐತಾಳ್ ಅವರನ್ನೇ ಪ್ರತಿಬಿಂಬಿಸುವ ಅವರ 80 ಕ್ಕೂ ಅಧಿಕ ಕೃತಿಗಳ ಒಟ್ಟು ತೆಳು ಸಾರದಂತೆ ಹೊರಬಂದಿದೆ ಈ ಕೃತಿ.
Related Articles
Advertisement
ವಿಶ್ವದ ನೆಲೆಯಲ್ಲಿ ಸ್ತ್ರೀ ಸ್ತರಗಳ ಸ್ವರ ಇರಬೇಕು ಎಂಬ ಆಶಯ ಒಟ್ಟು ಸಂಕಲನವಾಗಿ ಈ ಕೃತಿ ಹೊರಬಂದಿದೆ. ನರೇಂದ್ರ ಎಸ್. ಗಂಗೊಳ್ಳಿ ಇದರ ಸಂಪಾದನೆಯನ್ನು ಚೆನ್ನಾಗಿ ಮಾಡಿದ್ದಾರೆ.
ದಾರ್ಶನಿಕ ಪ್ರಜ್ಞೆಗಳ ದಾಖಲೀಕರಣ ಪಾರ್ವತಿ ಜಿ. ಐತಾಳ್ ಅವರ ಅನುವಾದ ಕೃತಿಗಳಲ್ಲಿ ಕಾಣುವ ಗುಣಧರ್ಮ. ಗೊತ್ತಿಲ್ಲದ ಒಬ್ಬ ಲೇಖಕನ ಬದುಕನ್ನು ಮತ್ತು ಅವರ ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾತ್ರ ಮಾಡುವುದು ಅನುವಾದವಲ್ಲ, ಇನ್ನೊಂದು ಭಾಷೆಗೆ ಭಾವವನ್ನು ಜೋಡಿಸುವ ಕೆಲಸವನ್ನು ಅನುವಾದ ಮಾಡುತ್ತದೆ ಎಂದು ತೋರಿಸಿಕೊಟ್ಟ ಕೆಲವೇ ಕೆಲವು ಅನುವಾದಕರಲ್ಲಿ ಡಾ. ಪಾರ್ವತಿ ಜಿ. ಐತಾಳ್ ಅಗ್ರಸ್ಥಾನದಲ್ಲಿ ಕಾಣಿಸುತ್ತಾರೆ ಎನ್ನುವುದಕ್ಕೆ ಅವರ ಅನುವಾದ ಕೃತಿಗಳಲ್ಲಿನ ಆಪ್ತ ಶೈಲಿಯೇ ಸಾಕ್ಷಿ.
ಬರಿಯ ಸ್ತ್ರೀ ಸಂವೇದನೆ ಅಲ್ಲ ಅಥವಾ ಬರಿಯ ಸ್ತ್ರೀ ಪರ ಕಾಳಜಿ ಅಲ್ಲ. ಸ್ತ್ರೀ ಪುರುಷರ ಸಮಾನತೆಯ ಮೃದುವಾದ ವಾದ ಸಂವಾದಗಳು ಇವರ ಕೃತಿಗಳಲ್ಲಿ ಗಮನಾರ್ಹ. ಮಾನವ ಸಂಬಂಧಗಳ ಬೆಳವಣಿಗೆ ಹಾಗೂ ಅದರ ಉಳಿವಿಕೆಯೂ ಅವರ ಎಲ್ಲಾ ಕೃತಿಗಳಲ್ಲಿ ಮುಖ್ಯಾಂಶಗಳಾಗಿ ಕಾಣಸಿಗುತ್ತವೆ. ಪ್ರಸ್ತುತತೆಗೆ ದರ್ಪಣ ರೂಪಿಯಾಗಿಯೂ ಅವರ ಸ್ವರಚಿತ ಹಾಗೂ ಅನುವಾದ ಕೃತಿಗಳಿವೆ ಎನ್ನುವುದು ವಿಶೇಷ. ಅಂದರೇ ಕೇವಲ ಕಾಲ್ಪನಿಕ ಮಾತ್ರವಲ್ಲ ವಾಸ್ತವದ ವಸ್ತು ಚಿತ್ರಣವೂ ಇಲ್ಲಿ ಪ್ರಾಧಾನ್ಯತೆಯನ್ನು ಕಂಡುಕೊಳ್ಳುತ್ತವೆ.
ಕೃತಿಗಳು ಒಂದು ಚಿಂತನೆಗೆ ಒಳಪಡಿಸಬೇಕು. ಅವಘಡಗಳನ್ನು ತಂದಿತ್ತ ಪಲ್ಲಟಗಳಿಗೆ ಉತ್ತರವಾಗಿರಬೇಕು. ಸಂವೇದನೆಯನ್ನು ಮೀಟುವ ಶಕ್ತಿಯಾಗಿರಬೇಕು ಎನ್ನುವುದಕ್ಕೆ ಪ್ರತಿರೂಪವಾಗಿ ಇವರ ಕೃತಿಗಳಿವೆ ಎನ್ನುವುದು ಸತ್ಯ.
ಸ್ತ್ರೀ ಸಂವೇದನೆಯ ಆಕ್ರೋಶಗಳು ಅವರ ಕೆಲವು ಕೃತಿಗಳಲ್ಲಿ ಸಣ್ಣದಾದ ಎಳೆ ತೋರಿಸಿಕೊಟ್ಟರೂ, ಪಾರ್ವತಿ ಜಿ. ಐತಾಳ್ ವಾಸ್ತವ ಬದುಕಿನಲ್ಲಿ ಬಂಡಾಯ ಎದ್ದೋ, ಹೋರಾಟ ಮಾಡಿಯೋ, ಪ್ರತಿಭಟನೆ ಮಾಡಿಯೋ ತಾನು ‘ಸ್ತ್ರೀ ಧ್ವನಿ’ ಎಂದು ತೋರಿಸಿಕೊಟ್ಟಂತಹ ವ್ಯಕ್ತಿತ್ವದವರಲ್ಲ. ಅವರೊಳಗಿನ ಅವ್ಯಕ್ತಗಳು ಅವರ ಕೃತಿಗಳಲ್ಲಿ ನೈಜ ಧ್ವನಿಯಾಗಿ ವ್ಯಕ್ತವಾಗಿವೆ ಎನ್ನುವುದಕ್ಕೆ ಅವರ ಕೃತಿಗಳು ಹಾಗೂ ಕುವೆಂಪು ಭಾಷಾ ಭಾರತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡು ಅನೇಕ ಪ್ರಶಸ್ತಿಗಳು ಲಭಿಸಿದ್ದೇ ಸಾಕ್ಷಿ.
ಮತ್ತೊಂದು ವಿಚಾರ ಅವರ ಕೃತಿಗಳಲ್ಲಿ ಕಾಣುವುದೇನೆಂದರೇ, ಸಂವೇದನೆ ಎನ್ನುವುದು ಬೌದ್ಧಿಕ ಚರ್ಚೆ ಮಾತ್ರವಲ್ಲ. ಅದಹ ಬೌದ್ಧಿಕ ಚರ್ಚೆಯ ಗಡಿ ದಾಟಿ ಎಲ್ಲಾ ವರ್ಗದ ಮಹಿಳೆಯರಿಗೆ ತಲುಪಬೇಕೆಂಬ ಆಶಯವಿದೆ. ಅನಾಮಿಕವಾಗಿಯೇ ಉಳಿದುಬಿಟ್ಟ ಅದೆಷ್ಟೋ ಹೆಣ್ಣು ಮಕ್ಕಳ ಮೂಕ ಸಂವೇದನೆಯನ್ನು ಅಕ್ಷರಕ್ಕಿಳಿಸಿ ಸಮಾಜದ ವ್ಯವಸ್ಥೆಗೆ ರಾಚುವಂತಹ ಶಕ್ತಿ ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಸಿಗುತ್ತವೆ.
ಇಷ್ಟೆಲ್ಲಾ ಪ್ರಬಲ ಧ್ವನಿ ಇರುವ ಒಬ್ಬ ಲೇಖಕಿಯ ಸುಮಾರು ಎಂಬತ್ತಕ್ಕೂ ಅಧಿಕ ಕೃತಿಗಳು ಕನ್ನಡದ ಓದುಗರಿಗೆ ಅಷ್ಟಾಗಿ ತಲುಪಿಲ್ಲ ಎನ್ನುವ ಬೇಸರ ನನಗಿದೆ. ಸಂಪಾದಕರು ಮತ್ತು ಅವರ ಬಳಗ ಅದೇ ಬೇಸರದಲ್ಲಿ ಪಾರ್ವತಿ ಜಿ. ಐತಾಳ್ ಅವರ ಕೃತಿ ನೋಟವನ್ನಾದರೂ ಕನ್ನಡದ ಓದುಗರಿಗೆ ತಲುಪಿಸುವ ಪ್ರಯತ್ನದಲ್ಲಿ ಈ ‘ಸುರಗಂಗೆ’ಯನ್ನು ಹೊರಗೆ ತಂದಿರಬಹುದೆಂದು ನನಗೆ ಅನ್ನಿಸಿದೆ. ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ, ಸ್ಥಾನಮಾನವಿದೆ. ಕನ್ನಡದಲ್ಲಿ ಅಷ್ಟಿಲ್ಲ. ಅದು ಬಲಾಢ್ಯರ ಪಾಲಾಗಿದೆ ಅಂತ ನನಗೆ ಅದೆಷ್ಟೋ ಬಾರಿ ಅನ್ನಿಸಿದೆ. ಕನ್ನಡದಲ್ಲಿಯೂ ಪಾರ್ವತಿ ಜಿ. ಐತಾಳ್ ಅಂತಹ ಒಬ್ಬ ಒಳ್ಳೆಯ ಲೇಖಕಿಯ ಧ್ವನಿಯನ್ನು ಮತ್ತಷ್ಟು ಪರಿಚಯಕ್ಕೆ ತರುವ ಪ್ರಯತ್ನದಲ್ಲಿ ಸಂಪಾದಕರು ಮತ್ತು ಅವರ ತಂಡ ಮಾಡಿದ ಪ್ರಯತ್ನ ಮೆಚ್ಚುವಂತದ್ದು. ಆ ಪ್ರಯತ್ನ ಸಾಫಲ್ಯ ಕಂಡುಕೊಳ್ಳಲಿ.
ಪಾರ್ವತಿ ಜಿ. ಐತಾಳ್ ಅವರ ಕೃತಿಗಳು ಕೇವಲ ಓದಿಗೆ ಖುಷಿ ಕೊಡುವವು ಮಾತ್ರ ಅಲ್ಲ. ಅದರೊಳಗೆ ಪರಾಮರ್ಶಿಸುವ, ಚಿಂತನೆಗೊಳಪಡಿಸುವ ಅಗಾಧ ಶಕ್ತಿಗಳಿವೆ. ಅದರ ಇಣುಕು ನೋಟ ‘ಸುರಗಂಗೆ’ಯಾಗಿ ಬಂದಿದೆ. ಲೇಖಕಿಯ ಎಲ್ಲಾ ಕೃತಿಗಳನ್ನು ಓದುವುದಕ್ಕೆ ಸಿಗದವರಿಗೆ, ಅವರ ಬಗ್ಗೆ ತಿಳಿಯುವುದಕ್ಕೆ ‘ಸುರಗಂಗೆ’ ವಿಕಿಪೀಡಿಯ ಇದ್ದ ಹಾಗೆ.
ಅವರಿಂದ ಸ್ತ್ರೀ ಸಂವೇದನೆಯ ಹೊಸ ನೆಲೆಗಟ್ಟಿನ ಕೃತಿಗಳು ಮತ್ತಷ್ಟು ಬರಲಿ ಎನ್ನುವುದು ನನ್ನ ತುಂಬೊಲವಿನ ಹಾರೈಕೆಯೊಂದಿಗೆ ಒಳ್ಳೆಯ ಓದಿನ ಚಿಂತನೆ ನೀಡಬಲ್ಲ ಪಾರ್ವತಿ ಅವರ ಕೃತಿಗಳು ನಿಮ್ಮ ಓದಿಗೆ ದಕ್ಕಲಿ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…!