ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಒದಗಿಸುವ ಮಹತ್ವದ ಸೇವೆಗೆ ಗಣ ರಾಜ್ಯೋತ್ಸವ ದಿನ ಚಾಲನೆ ನೀಡಲಾಗುವುದು ಎಂದು ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರಕಟಿಸಿದ್ದಾರೆ.
ಬುಧವಾರ ಸರ್ವೋಚ್ಚ ನ್ಯಾಯಾಲಯದ ಕಲಾಪ ಆರಂಭವಾದೊಡನೆ ಮಾತನಾಡಿದ ಸಿಜೆಐ ನ್ಯಾ| ಚಂದ್ರ ಚೂಡ್, ಸುಪ್ರೀಂ ಕೋರ್ಟ್‌ನ ತೀರ್ಪು ಗಳನ್ನು ವಿವಿಧ ಸ್ಥಳೀಯ ಭಾಷೆ ಗಳಲ್ಲಿ ಉಚಿತವಾಗಿ ಒದಗಿಸುವ ಸೇವೆಯನ್ನು ಎಲೆ ಕ್ಟ್ರಾನಿಕ್ – ಸುಪ್ರೀಂ ಕೋರ್ಟ್ ರಿಪೋರ್ಟ್ಸ್(ಇ-ಎಸ್‌ಸಿಆರ್)ನ ಭಾಗವಾಗಿ ಗುರುವಾರ ಆರಂಭಿಸಲಾಗುತ್ತದೆ ಎಂಬುದಾಗಿ ಪ್ರಕಟಿಸಿದರು.
ಸರಿಸುಮಾರು 34 ಸಾವಿರ ತೀರ್ಪುಗಳನ್ನು ಒಳಗೊಂಡಿರುವ ಇ-ಎಸ್‌ಸಿಆರ್ ವಿಸ್ತೃತ ಶೋಧ ಸೌಲಭ್ಯ ವನ್ನೂ ಹೊಂದಿದೆ. ಸ್ಥಳೀಯ ಭಾಷೆಗಳಲ್ಲಿ ಸುಮಾರು 1,091 ತೀರ್ಪುಗಳಿದ್ದು, ಗಣರಾಜ್ಯೋತ್ಸವ ದಿನದಿಂದ ಇವು ಸಾರ್ವಜನಿಕವಾಗಿ ಲಭ್ಯವಾಗುತ್ತವೆ ಎಂದು ನ್ಯಾ| ಚಂದ್ರಚೂಡ್ ತಿಳಿಸಿದರು.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿರುವ ವಿವಿಧ ಭಾಷೆಗಳಲ್ಲಿ ಈ ತೀರ್ಪುಗಳನ್ನು ಒದಗಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಸಾಕಷ್ಟು ಶ್ರಮ ವಹಿಸಿದೆ ಎಂದೂ ಸಿಜೆಐ ತಿಳಿಸಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ದೇಶದ 22 ಭಾಷೆಗಳು ಸೇರಿವೆ.
Related Articles
ಏನಿದು ಇ-ಎಸ್‌ಸಿಆರ್?
ಸುಪ್ರೀಂಕೋರ್ಟ್ ತನ್ನ 34 ಸಾವಿರದಷ್ಟು ತೀರ್ಪುಗಳನ್ನು ದೇಶಾದ್ಯಂತ ಎಲ್ಲರೂ ಉಚಿತವಾಗಿ ಓದಬಹುದಾದಂತಹ ಎಲೆಕ್ಟ್ರಾನಿಕ್ ಸುಪ್ರೀಂ ಕೋರ್ಟ್ ರಿಪೋರ್ಟ್ಸ್ (ಇ-ಎಸ್‌ಸಿಆರ್) ಯೋಜನೆಯ ಆರಂಭವನ್ನು ಇದೇ ವರ್ಷದ ಜ. 2ರಂದು ಘೋಷಿಸಿತ್ತು. ಇದರಲ್ಲಿ 2023ರ ಜ. 1ರ ವರೆಗಿನ ತೀರ್ಪುಗಳು ಪರಿಶೀಲನೆಗೆ ಲಭ್ಯ ಎಂದು ಸಿಜೆಐ ಹೇಳಿದ್ದರು.
ದೇಶಾದ್ಯಂತ ವಕೀಲರು ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ಸಂದರ್ಭ “ಸುಪ್ರೀಂ ಕೋರ್ಟ್ ರಿಪೋರ್ಟ್ಸ್’ ಮತ್ತಿತರ ಅಧಿಕೃತ ಕಾನೂನು ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುವ ತೀರ್ಪುಗಳನ್ನು ಉಲ್ಲೇಖಿಸುತ್ತಾರೆ. ಇ-ಎಸ್‌ಸಿಆರ್ ಇವೇ ತೀರ್ಪುಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ನ್ಯಾಶನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್‌ನ ಸಹಾಯದಿಂದ ಡಿಜಿಟಲ್ ತೀರ್ಪುಗಳ ಈ ವಿಶಾಲ ಸಂಗ್ರಹದಲ್ಲಿ ಬೇಕಾದ ತೀರ್ಪನ್ನು ಸುಲಭ ವಾಗಿ ಹುಡುಕುವುದಕ್ಕಾಗಿ ಸರ್ಚ್ ಎಂಜಿನ್ ಕೂಡ ಒದಗಿಸಿದೆ. ಇದರ ಮೂಲಕ ಇ-ಎಸ್‌ಸಿಆರ್‌ನಲ್ಲಿ ಉಚಿತ ಟೆಕ್ಸ್ಟ್ ಸರ್ಚ್, ಸರ್ಚ್ ವಿದಿನ್ ಸರ್ಚ್, ಪ್ರಕರಣದ ವಿಧ ಮತ್ತು ವರ್ಷ ಆಧಾರಿತ ಸರ್ಚ್, ನ್ಯಾಯಮೂರ್ತಿ ಆಧಾರಿತ ಸರ್ಚ್ ಇತ್ಯಾದಿಯಾಗಿ ಶೋಧ ನಡೆಸಬಹುದಾಗಿದೆ.
ಕನ್ನಡದ 17 ತೀರ್ಪು
ಸ್ಥಳೀಯ ಭಾಷೆಗಳ ಪೈಕಿ ತಮಿಳಿನಲ್ಲಿ ಅತೀ ಹೆಚ್ಚು, ಅಂದರೆ 52 ತೀರ್ಪುಗಳಿವೆ. ಮರಾಠಿಯಲ್ಲಿ 14, ಮಲಯಾಳದಲ್ಲಿ 29, ಅಸ್ಸಾಮಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಾಲ್ಕು, ಮರಾಠಿಯಲ್ಲಿ 14, ಒರಿಯಾದಲ್ಲಿ 21, ತೆಲುಗಿನಲ್ಲಿ 28, ಉರ್ದುವಿನಲ್ಲಿ ಮೂರು ತೀರ್ಪುಗಳಿವೆ. 17 ತೀರ್ಪುಗಳು ಕನ್ನಡದಲ್ಲಿ ಲಭ್ಯವಿವೆ ಎಂದು ನ್ಯಾ| ಚಂದ್ರಚೂಡ್ ತಿಳಿಸಿದ್ದಾರೆ.
ಎಲ್ಲಿ ಲಭ್ಯ?
ಸುಪ್ರೀಂ ಕೋರ್ಟ್‌ನ ಇ-ಎಸ್‌ಸಿಆರ್ ಯೋಜನೆಯ ಭಾಗವಾಗಿರುವ ಈ ಸೇವೆ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್, ಅದರ ಮೊಬೈಲ್ ಆ್ಯಪ್ ಮತ್ತು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್‌ಜೆಡಿಜಿ)ನ ಜಡ್ಜ್ಮೆಂಟ್ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ.