ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯ ಮಹತ್ತರ ಹೊಣೆಗಾರಿಕೆಯನ್ನು ಹೊಂದಿರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಕಾರ್ಯವೈಖರಿಯ ಕುರಿತಂತೆ ಈಗ ಸುಪ್ರೀಂ ಕೋರ್ಟ್ ಒಂದಿಷ್ಟು ಗರಂ ಆಗಿದ್ದು, ಪ್ರಕರಣಗಳ ತನಿಖೆ ಮತ್ತು ವಿಚಾರಣ ಕ್ರಮದಲ್ಲಿ ಸೂಕ್ತ ಸುಧಾರಣೆಗಳನ್ನು ತರುವಂತೆ ತಾಕೀತು ಮಾಡಿದೆ. ಇ.ಡಿ. ಸುತ್ತ ಹತ್ತು ಹಲವು ವಿವಾದಗಳು, ಆರೋಪಗಳು ಸುತ್ತಿಕೊಂಡಿರುವಂತೆಯೇ ಸುಪ್ರೀಂ ಕೋರ್ಟ್‌ನ ಈ ನಿರ್ದೇಶನ ಅತ್ಯಂತ ಸಮುಚಿತ ಮತ್ತು ಬಹಳಷ್ಟು ಮಹತ್ವಪೂರ್ಣದ್ದಾಗಿದೆ.
ಇ.ಡಿ. ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದರೂ ಸ್ಥಾಪನೆಯಾದಾಗಿನಿಂದಲೂ ಈ ಸ್ವಾಯತ್ತ ಸಂಸ್ಥೆಯನ್ನು ಕೇಂದ್ರದಲ್ಲಿನ ಆಡಳಿತಾರೂಢ ಸರಕಾರಗಳು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳ ವಿರುದ್ಧ ಛೂ ಬಿಡುತ್ತಿದೆ ಎಂಬ ಆರೋಪ ಇಂದು-ನಿನ್ನೆಯದೇನಲ್ಲ. ಇತ್ತೀಚಿನ ವರ್ಷಗಳಲ್ಲಂತೂ ಇ.ಡಿ. ಭಾರೀ ಸದ್ದು ಮಾಡುತ್ತಿದ್ದು, ಇದರ ವಿರುದ್ಧದ ಆರೋಪಗಳು ಕೂಡ ಹೆಚ್ಚುತ್ತಲೇ ಇವೆ. ಇವೆಲ್ಲದರ ನಡುವೆ ಸುಪ್ರೀಂ ಕೋರ್ಟ್ ನಿರ್ದಿಷ್ಟ ಪ್ರಕರಣವೊಂದರ ವಿಚಾರಣೆ ವೇಳೆ ಇ.ಡಿ.ಯ ತನಿಖೆ ಮತ್ತು ವಿಚಾರಣ ಕಾರ್ಯವಿಧಾನದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದೇ ಅಲ್ಲದೆ ಒಟ್ಟಾರೆ ಕಾರ್ಯಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವಂತೆ ನೇರವಾಗಿ ತಾಕೀತು ಮಾಡಿರುವುದು ಗಮನಾರ್ಹ.
ಛತ್ತೀಸ್‌ಗಢದ ಉದ್ಯಮಿಯೋರ್ವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಇ.ಡಿ. ಕಾರ್ಯವಿಧಾನದ ಬಗೆಗೆ ಕೆಲವು ಮಹತ್ವದ ಅಂಶಗಳನ್ನು ಉಲ್ಲೇಖೀಸಿ ಈ ನಿರ್ದೇಶನ ನೀಡಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಇ.ಡಿ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 5,000 ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ ಕೇವಲ 40 ಪ್ರಕರಣಗಳಲ್ಲಷ್ಟೇ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಸಂಸತ್‌ಗೆ ಮಾಹಿತಿ ನೀಡಿತ್ತು. ಇದೇ ಅಂಶವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಪ್ರಸ್ತಾವಿಸಿ, ಇ.ಡಿ. ಬೇಕಾಬಿಟ್ಟಿಯಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದೆಯೇ ಅಥವಾ ಈ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯಲ್ಲಿ ಏನಾದರೂ ಲೋಪದೋಷಗಳಿವೆಯೇ ಎಂದು ಇ.ಡಿ.ಯನ್ನು ಪ್ರಶ್ನಿಸಿದೆ. ಅಷ್ಟು ಮಾತ್ರವಲ್ಲದೆ ಜಾರಿ ನಿರ್ದೇಶನಾಲಯ ದಾಖಲಿಸುವ ಪ್ರತಿಯೊಂದು ಪ್ರಕರಣ ಕೂಡ ಆರ್ಥಿಕತೆಗೆ ಸಂಬಂಧಿಸಿದ್ದಾಗಿದ್ದರಿಂದ ಇದು ನೇರವಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ಪ್ರತಿಯೊಂದು ಪ್ರಕರಣ ದಾಖಲಿಸುವಾಗ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಹೆಜ್ಜೆ ಇಡಬೇಕು. ಯಾರ್ಯಾರದೋ ಹೇಳಿಕೆಯನ್ನು ಆಧರಿಸಿ ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಆರ್ಥಿಕ ಅಪರಾಧ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ. ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡ ಬಳಿಕ ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕುವುದು ಇ.ಡಿ.ಯ ಹೊಣೆಗಾರಿಕೆಯಾಗಿದೆ. ಇದು ಬಿಟ್ಟು ಕೇವಲ ಪ್ರಕರಣಗಳನ್ನು ದಾಖಲಿಸುವುದಕ್ಕಷ್ಟೇ ಇ.ಡಿ. ಅಧಿಕಾರಿಗಳು ಸೀಮಿತವಾಗಬಾರದು. ದಾಖಲಾದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಇ.ಡಿ. ಅಧಿಕಾರಿಗಳು ಮಾಡಬೇಕು ಎಂದು ನ್ಯಾಯಪೀಠ ಕಿವಿಮಾತು ಹೇಳಿರುವುದು ಒಟ್ಟಾರೆ ಇ.ಡಿ.ಯ ಕರ್ತವ್ಯ ನಿರ್ವಹಣೆ, ಕಾರ್ಯಚರಣ ವಿಧಾನಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ಈ ನಿರ್ದೇಶನ ಕೇಂದ್ರ ಸರಕಾರಕ್ಕೂ ಅದರ ಉತ್ತರದಾಯಿತ್ವವನ್ನು ನೆನಪಿಸಿಕೊಟ್ಟಿದೆ. ಅಕ್ರಮ ಹಣ ವರ್ಗಾವಣೆ, ಅಕ್ರಮ ಸಂಪತ್ತಿನ ಸಕ್ರಮ ಮತ್ತಿತರ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇ.ಡಿ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾಗಲು ಅದಕ್ಕೆ ಅಗತ್ಯ ಮೂಲಸೌಕರ್ಯ, ಸಹಕಾರ ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ.