Advertisement

ಎಸ್‌ಸಿ,ಎಸ್ಟಿ ತೀರ್ಪು ವಾಪಸ್‌ ಪಡೆಯಿರಿ

06:00 AM Apr 13, 2018 | |

ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸಡಿಲಿಕೆಯ ತೀರ್ಪು  ಬಳಿಕ ದೇಶಾದ್ಯಂತ ಉಂಟಾದ ಹಿಂಸಾಚಾರದಿಂದ ಎಚ್ಚೆತ್ತಿರುವ ಕೇಂದ್ರ ಸರಕಾರವು ಇಂಥ ತೀರ್ಪು ನೀಡಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವೇ ಇಲ್ಲ  ಎಂದು ಸ್ಪಷ್ಟವಾಗಿ ಹೇಳಿದೆ. ಕೇಂದ್ರದ ಪರವಾಗಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ಗೆ ಪತ್ರವನ್ನು ಸಲ್ಲಿಸಿದ್ದು, ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಕಠಿನ ನಿಯಮಗಳನ್ನು ಸುಪ್ರೀಂ ಕೋರ್ಟ್‌ ಸಡಿಲ ಗೊಳಿಸಿದ್ದರಿಂದ ಇಡೀ ದೇಶಕ್ಕೆ ಬಹುದೊಡ್ಡ ಹಾನಿ ಯುಂಟಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಜನರ ಕೋಪ ಮತ್ತು ಪರಸ್ಪರ ನಂಬುಗೆಯ ಮೇಲೆಯೇ ಪ್ರಶ್ನೆ ಮೂಡುವಂತಾಗಿದೆ ಎಂದೂ ಹೇಳಿದ್ದಾರೆ.

Advertisement

ಕೇಂದ್ರ ಸರಕಾರದ ಈ ಪತ್ರ ತೀರಾ ಖಾರವಾಗಿಯೇ ಇದ್ದು, ಮುಂದೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತಷ್ಟು ಬಿರುಕು ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಮಾ.20ರಂದು ಸುಪ್ರೀಂ ನೀಡಿದ್ದ ತೀರ್ಪಿಗೆ ಪ್ರತಿಯಾಗಿ ಈಗಾಗಲೇ ಸಲ್ಲಿಸಲಾಗಿರುವ ಮರು ಪರಿಶೀಲನ ಅರ್ಜಿಗೆ ಪೂರಕವಾಗಿ ಈ ಪತ್ರವನ್ನು ಸಲ್ಲಿಕೆ ಮಾಡಲಾಗಿದೆ. ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವೇ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ವಾಪಸ್‌ ಪಡೆಯಬೇಕು ಎಂದು ವೇಣು ಗೋಪಾಲ್‌ ವಾದ ಮಂಡಿಸಿದ್ದಾರೆ.

ಅಧ್ಯಾದೇಶ ಹೊರಡಿಸಿ: ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ನಿಸ್ಸಾರವಾಗಿದ್ದು, ಇದಕ್ಕಾಗಿ ಕೇಂದ್ರ ಸರಕಾರ ಈ ಕೂಡಲೇ ಅಧ್ಯಾದೇಶ ಹೊರಡಿಸಿ ಕಾಯ್ದೆಗೆ ಮರುಜೀವ ಕೊಡಬೇಕು ಎಂದು ದೇಶದ ಪ್ರಮುಖ ದಲಿತ ನಾಯಕರು ಆಗ್ರಹಿಸಿದ್ದಾರೆ. ದಿಲ್ಲಿಯಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳ ನಾಯಕರು ಎ.14ರಂದು ಸಂವಿಧಾನ ರಕ್ಷಣೆ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಮರಿಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು, ಕೇಂದ್ರ ಸರಕಾರ ಮುಂದಿನ ಅಧಿವೇಶನದಲ್ಲೇ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಶಕ್ತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈಗ್ಯಾಕೆ ಈ ಪತ್ರ?: ಮಾರ್ಚ್‌ 20ರಂದು ಪ್ರಕಟಗೊಂಡ ಸುಪ್ರೀಂ ಕೋರ್ಟ್‌ನ ಆದೇಶದ ಪರಿಣಾಮ ಎ.2ರಂದು “ಭಾರತ ಬಂದ್‌’ಗೆ ಕಾರಣವಾಗಿದ್ದಲ್ಲದೆ, ಅಂದಿನ ಹಿಂಸಾಚಾರದಿಂದಾಗಿ 8 ಮಂದಿ ಸಾವನ್ನಪ್ಪಿದ್ದರು. ಜತೆಗೆ ಸುಪ್ರೀಂ ಕೋರ್ಟ್‌ನ ತೀರ್ಪು ದಲಿತರ ರಕ್ಷಣೆಗಾಗಿ ಇದ್ದ ಕಾಯ್ದೆಯನ್ನು ಸಂಪೂರ್ಣ ನಿಸ್ಸಾರಗೊಳಿಸುವಂತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಮರುಪರಿಶೀಲನ ಅರ್ಜಿ ಸಲ್ಲಿಸುವಂತೆ ಕೇಂದ್ರದ ಮೇಲೆ ಒತ್ತಡವೂ ಕೇಳಿಬಂದಿತ್ತು.

ಕೇಂದ್ರ ಸರಕಾರದ ಪತ್ರದಲ್ಲೇನಿದೆ?
1. ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತೀರಾ ಸೂಕ್ಷ್ಮವಾದ ವಿಚಾರ. ಹೀಗಾಗಿಯೇ ತೀರ್ಪಿನಿಂದಾಗಿ ದೇಶದಲ್ಲಿ “ದಂಗೆ’, “ಕ್ರೋಧ’, “ಅಸಹನೆ’, “ಪರಸ್ಪರ ಜಗಳ’ ಉಂಟಾಯಿತು.

Advertisement

2. ಯಾವುದೇ ಗೊಂದಲಗಳಿಗೆ ಕಾರಣವಾಗದಂತೆ ಕೋರ್ಟ್‌ ತೀರ್ಪನ್ನು ಮರುಪರಿ ಶೀಲಿಸಬೇಕು ಮತ್ತು ವಾಪಸ್‌ ತೆಗೆದುಕೊಳ್ಳಬೇಕು. ಆಗ ಮಾತ್ರ ಜನ ತೀರ್ಪಿನ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ತಪ್ಪುತ್ತದೆ. 

3. ಇಡೀ ತೀರ್ಪು ದುರ್ಬಲವಾಗಿದ್ದು, ಇಂಥ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರವಿಲ್ಲದಿದ್ದರೂ ಕೋರ್ಟ್‌ ಕಾಯ್ದೆ ಸಡಿಲಗೊಳಿಸುವ ಕೆಲಸ ಮಾಡಿದೆ.

4. ಈಗಾಗಲೇ ಗೊತ್ತಿರುವ ಹಾಗೆ ವಿವಾದಗಳು ಉಂಟಾದ ಸಂದರ್ಭದಲ್ಲಿ ಕೋರ್ಟ್‌ ತನ್ನ ಗಡಿಯನ್ನು ಮೀರಿ ಆಚೆ ಹೋಗಬಹುದು, ಆದರೆ ಈಗಾಗಲೇ ಇರುವ ರೂಪಿತ ಶಾಸನವನ್ನು ಮೀರಿ ಇದಕ್ಕೆ ಸಂಘರ್ಷವುಂಟಾಗುವ ರೀತಿಯಲ್ಲಿ ಆದೇಶ ಕೊಡಬಾರದು.

5.  ಇಲ್ಲಿ ದುರ್ಬಲವಾದ ಹೇಳಿಕೆಯೊಂದಿದೆ; ಕೋರ್ಟ್‌ಗೆ ಕಾನೂನು ರೂಪಿಸುವ ಅಧಿಕಾರವಿದೆ ಹಾಗೂ ಇರುವ ಸೀಮಿತ ಕರ್ತವ್ಯದಲ್ಲೇ ಕಾನೂನುಗಳು ಇಲ್ಲದ ಕಡೆಯಲ್ಲಿ ರೂಪಿಸಬಹುದು ಎಂಬುದು ದಾರಿತಪ್ಪಿಸುವ ಸಂಗತಿ. ಏಕೆಂದರೆ ನಾವು ಲಿಖೀತ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಇದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಯಾವ ಕೆಲಸ ಮಾಡಬೇಕು ಎಂಬುದನ್ನು ಸರಿಯಾಗಿಯೇ ಹಂಚಿಕೆ ಮಾಡಿದೆ.

6. ಆದರೆ ಅಧಿಕಾರಗಳ ವರ್ಗೀಕರಣವಾ ಗಿದ್ದರೂ ದೇಶದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನವನ್ನು ಎತ್ತಿಹಿಡಿ ಯುವ ಕೆಲಸ ಮಾಡಬೇಕು. ಇದಕ್ಕೆ ಬದಲಾಗಿ ಸಂಸತ್‌ ಮತ್ತು ಶಾಸಕಾಂಗಕ್ಕೆ ಇರುವ ಶಾಸನ ಮಾಡುವ ಅಧಿಕಾರವನ್ನು ಕಸಿಯುವ ಕೆಲಸ ಮಾಡಕೂಡದು.

7. ನ್ಯಾಯಮೂರ್ತಿಗಳು ಕಾನೂನು ರೂಪಿಸುವಾಗ ಇಂಗ್ಲೆಂಡ್‌ನ‌ ತೀರ್ಪು ಗಳನ್ನು ಉಲ್ಲೇಖೀಸುತ್ತಾರೆ. ಆದರೆ, ಕೋರ್ಟ್‌ನ ಈ ತತ್ವಗಳು ಲಿಖೀತ ಸಂವಿಧಾನವಿರುವ ಭಾರತ ದೇಶಕ್ಕೆ ಅನ್ವಯವಾಗುವುದೇ ಇಲ್ಲ. ಏಕೆಂದರೆ ಇಂಗ್ಲೆಂಡ್‌ನ‌ಲ್ಲಿ ಈಗಲೂ ಲಿಖೀತ ಸಂವಿಧಾನ ಇಲ್ಲವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next