ಹೊಸದಿಲ್ಲಿ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವುದಕ್ಕೆ ಸಂಬಂಧಿಸಿ ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಮಂಗಳವಾರ ಕೆಲವು ನಿರ್ದೇಶನಗಳನ್ನು ನೀಡಿದೆ.
ಇಂಥ ಪ್ರಕರಣಗಳ ವಿಚಾರಣೆ ಶೀಘ್ರಗತಿಯಲ್ಲಿ ನಡೆಸಬೇಕು, ಕೆಳ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗಳನ್ನು ಕಾರಣವಿಲ್ಲದೆ ಮುಂದೂಡ ಬಾರದು, ವಿಶೇಷ ಕೋರ್ಟ್‌ಗಳಲ್ಲೇ ಇಂಥ ಕೇಸುಗಳ ವಿಚಾರಣೆ ನಡೆಯಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಹೈಕೋರ್ಟ್ ಹಾಗೂ ಕೆಳಹಂತದ ಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ನೀಡಿದೆ.
ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರಣೆ ನಡೆಸಲು ಮೂವರು ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ, ಆ ಸಮಿತಿಯ ಉಸ್ತುವಾರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುವಂತೆಯೂ ಹೈಕೋರ್ಟ್‌ಗಳಿಗೆ ಸಲಹೆ ನೀಡಿದೆ. ಇದೇ ವೇಳೆ, ಅತ್ಯಾಚಾರವಾದ ಬಳಿಕ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗುವಂಥ ಸಂತ್ರಸ್ತ ಮಕ್ಕಳಿಗೆ ಭವಿಷ್ಯದಲ್ಲೂ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಕೇಂದ್ರ ಸರಕಾರವು 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗರಿಷ್ಠ ಗಲ್ಲುಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ವರ್ಷದ ಜನವರಿ 28ರಂದು ದಿಲ್ಲಿಯಲ್ಲಿ ಎಂಟು ತಿಂಗಳ ಹೆಣ್ಣು ಮಗುವಿನ ಮೇಲೆ 28 ವರ್ಷದ ಸಂಬಂಧಿ ನಡೆಸಿದ ಅತ್ಯಾಚಾರ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ನಿರ್ದೇಶನಗಳನ್ನು ನೀಡಿದೆ. ಅರ್ಜಿದಾರ ಅಲಾಕ್ ಅಲೋಖ್ ಶ್ರೀವಾಸ್ತವ ಎಂಬವರು ಅತ್ಯಾಚಾರ ನಡೆಸಿದ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದರು.
ಹೈಕೋರ್ಟ್‌ಗಳಿಗೆ ನಿರ್ದೇಶನಗಳೇನು?
– ಹೈಕೋರ್ಟ್‌ಗಳು ವಿಚಾರಣೆಯ ಮೇಲ್ವಿಚಾರಣೆಗೆ ಮೂವರು ಜಡ್ಜ್ ಗಳುಳ್ಳ ಸಮಿತಿ ರಚಿಸಲಿ
– ಪೋಕ್ಸೋ ಕಾಯ್ದೆಯಡಿ ದಾಖಲಾದ ಕೇಸುಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯಗಳೇ ನಡೆಸಲಿ ಪದೇ ಪದೆ ಅನಗತ್ಯವಾಗಿ ವಿಚಾರಣೆ ಮುಂದೂಡದಂತೆ ವಿಶೇಷ ಕೋರ್ಟ್‌ನ ಜಡ್ಜ್ ಗಳಿಗೆ ಹೈಕೋರ್ಟ್‌ಗಳು ನಿರ್ದೇಶಿಸಲಿ
– ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯುವಾಗ ಮಕ್ಕಳ ಸ್ನೇಹಿ ವಾತಾವರಣವಿರಲಿ