ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರು ರಾಜೀನಾಮೆ ಅಂಗೀಕಾರದ ಕುರಿತು ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಮಧ್ಯಂತರ ಆದೇಶ ಬಂಡಾಯ ಶಾಸಕರಿಗೆ ಬಿಗ್ ರಿಲೀಫ್ ಕೊಟ್ಟಂತಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅತೃಪ್ತ ಶಾಸಕರು ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ನಂಬರ್ ಗೇಮ್ ಬಹುತೇಕ ಅಂತ್ಯಗೊಂಡಂತಾಗಿದೆ.
ಬಂಡಾಯ ಶಾಸಕರು ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮೈತ್ರಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಿಜೆಪಿಗೆ ಮ್ಯಾಜಿಕ್ ನಂಬರ್ :
224 ಸದನ ಬಲ ಹೊಂದಿರುವ ವಿಧಾನಸಭೆಯಲ್ಲಿ ನಾಳೆ ಅಧಿವೇಶನಕ್ಕೆ 16 ಬಂಡಾಯ ಶಾಸಕರು ಗೈರು ಹಾಜರಾದರೆ, ಸದನದ ಬಲ 208ಕ್ಕೆ ಕುಸಿಯಲಿದೆ. ಈ ನಿಟ್ಟಿನಲ್ಲಿ ಬಹುಮತ ಸಾಬೀತಿಗೆ ಬೇಕಾಗುವ ಮ್ಯಾಜಿಕ್ ನಂಬರ್ 105. ಹೀಗಾಗಿ 101 ಶಾಸಕರನ್ನು ಹೊಂದಿರುವ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಬಿಜೆಪಿ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 107 ಶಾಸಕರ ಬೆಂಬಲ ಹೊಂದಿದಂತಾಗಿದೆ.
ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಎಚ್.ಡಿ.ಕುಮಾರಸ್ವಾಮಿಗೆ ಬಹುಮತ ಸಾಬೀತು ಅಸಾಧ್ಯವೇ ಆಗಿದ್ದು, ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ಹೊಂದಿರುವುದರಿಂದ ಬಹುಮತ ಸಾಬೀತುಪಡಿಸಲಿದೆ.
ಬಂಡಾಯ 16 ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.