ನವದೆಹಲಿ: ಮುಸ್ಲಿಮರಲ್ಲಿ ಜಾರಿಯಲ್ಲಿರುವ “ನಿಕಾಹ್ ಹಲಾಲಾ’ ಮತ್ತು “ಬಹುಪತ್ನಿತ್ವ’ ಪದ್ಧತಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಾಗಿ ಸೂಕ್ತ ಸಮಯದಲ್ಲಿ ಐವರು ನ್ಯಾಯಮೂರ್ತಿಗಳ ಹೊಸ ಸಂವಿಧಾನ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಕಳೆದ ವರ್ಷದ ಆ.30ರಂದು ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ. ಹೇಮಂತ್ ಗುಪ್ತಾ ಸೇರಿದಂತೆ ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠವು ಈ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೋರಿತ್ತು.
ಆದರೆ, ನಂತರದಲ್ಲಿ ಸೆ.23 ಮತ್ತು ಅ.6ರಂದು ಕ್ರಮವಾಗಿ ನ್ಯಾ.ಬ್ಯಾನರ್ಜಿ ಮತ್ತು ನ್ಯಾ.ಗುಪ್ತಾ ಅವರು ನಿವೃತ್ತರಾದರು. ಹೀಗಾಗಿ, ಈ ಅರ್ಜಿಗಳ ವಿಚಾರಣೆಗಾಗಿ ಹೊಸ ನ್ಯಾಯಪೀಠ ಸ್ಥಾಪಿಸಬೇಕಾದ ಅನಿವಾರ್ಯತೆ ಸುಪ್ರೀಂ ಕೋರ್ಟ್‌ಗೆ ಉಂಟಾಗಿದೆ. ಸದ್ಯದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಗುರುವಾರ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.