ನವದೆಹಲಿ: ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರ ಹಾಗೂ ಗುಂಪು ಹಲ್ಲೆಯ ಮೂಲಕ ವ್ಯಕ್ತಿಗಳನ್ನು ಹತ್ಯೆಗೈಯುವ ಘಟನೆಯನ್ನು ಖಂಡಿಸಿರುವ ಸುಪ್ರೀಂಕೋರ್ಟ್ ಮಂಗಳವಾರ ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವ ಗುಂಪು ಹಿಂಸೆಯಲ್ಲಿ ಪಾಲ್ಗೊಳ್ಳುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಂಸತ್ ಕಾನೂನನ್ನು ರೂಪಿಸಲಿ ಎಂದು ಸಲಹೆ ನೀಡಿದೆ.
ದೇಶದ ಯಾವೊಬ್ಬ ನಾಗರಿಕನೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು.ಭಯದ ವಾತಾವರಣ ಹಾಗೂ ಅರಾಜಕತೆಯಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಲ್ಲದೇ ಯಾವುದೇ ಕಾರಣಕ್ಕೂ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಪೀಠ ತಿಳಿಸಿದೆ.
ಗೋರಕ್ಷಣೆಯ ಹೆಸರಿನಲ್ಲಿನ ಹಿಂಸೆ ಹಾಗೂ ಗುಂಪು ದಾಳಿಯನ್ನು ಮಟ್ಟಹಾಕುವಲ್ಲಿ ಹೊಸ ಕಾನೂನನ್ನು ರಚಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾನೂನು ರಚಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಜಸ್ಟೀಸ್ ಎಎಮ ಖಾನ್ ವಿಲ್ಕಾರ್ ಹಾಗೂ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದೆ.
ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ನೀಡಿದ್ದ ಆದೇಶವನ್ನು ಪಾಲನೆ ಮಾಡಿಲ್ಲ, ಈ ಬಗ್ಗೆ ವಿವರಣೆ ನೀಡುವಂತೆ ರಾಜಸ್ಥಾನ, ಹರ್ಯಾಣ ಹಾಗೂ ಉತ್ತರಪ್ರದೇಶ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ 6ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಈ ಮೂರು ರಾಜ್ಯಗಳು ಪಾಲಿಸುತ್ತಿಲ್ಲ ಎಂದು ದೂರಿ ಮಹಾತ್ಮ ಗಾಂಧಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಿತ್ತು.