Advertisement

CM ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ ನಿರಾಳತೆ

10:49 PM Feb 19, 2024 | Team Udayavani |

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್‌ ನಾಯಕರು 2022ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ಸೋಮವಾರ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಜತೆಗೆ, ಸಿಎಂ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಎಂಬಿ ಪಾಟೀಲ್‌, ಎಐಸಿಸಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೂ ನ್ಯಾ| ಹೃಷಿಕೇಶ್‌ ರಾಯ್‌ ಮತ್ತು ನ್ಯಾ| ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಡೆ ತಂದಿದೆ.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರಕಾರ ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸ್‌ ಜಾರಿ ಮಾಡಿ, 6 ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

2022ರಲ್ಲಿ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ ನಡೆದಾಗ, ಆಗ ಸಚಿವರಾಗಿದ್ದ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಸಿದ್ದರಾಮಯ್ಯ ಮತ್ತು ಇತರರು ಪ್ರತಿಭಟನ ಮೆರವಣಿಗೆ ನಡೆಸಿದ್ದರು. ಅನಂತರ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ವಿಚಾರಣೆ ಕೈಬಿಡುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌, ಫೆ.26ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಜತೆಗೆ, ತಲಾ 10 ಸಾವಿರ ರೂ. ದಂಡವನ್ನೂ ವಿಧಿಸಿತ್ತು.

ಜನಸಾಮಾನ್ಯರು ಮಾಡಿದ್ದರೆ ಸುಮ್ಮನಿರುತ್ತಿದ್ದಿರೇ: ನ್ಯಾ| ಪ್ರಶ್ನೆ
ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಕ್ರಿಮಿನಲ್‌ ಕೇಸು ಹಾಕಲಾಗಿದೆ. ಇದು ಸಂವಿಧಾನದ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಎಂದು ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ  ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಈ ವೇಳೆ, ಪ್ರತಿಕ್ರಿಯಿಸಿದ ನ್ಯಾ| ಮಿಶ್ರಾ, ಪ್ರತಿಭಟನ ಮೆರವಣಿಗೆಗೆ ಅನುಮತಿ ಪಡೆಯಲಾಗಿತ್ತೇ? ಏಕಾಏಕಿ ಸಾವಿರಾರು ಮಂದಿ ಒಂದು ಪ್ರದೇಶದಲ್ಲಿ ಸೇರಿ, ನಾವು ಪ್ರತಿಭಟನೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸುವುದು ಸರಿಯೇ? ಇದನ್ನೇ ಜನಸಾಮಾನ್ಯರು ಮಾಡಿರುತ್ತಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ರಾಜಕಾರಣಿಗಳು ಮಾಡಿದರೆ ಸರಿ ಎನ್ನುವುದು ನಿಮ್ಮ ವಾದವೇ’ ಎಂದು ಖಡಕ್ಕಾಗಿ ಪ್ರಶ್ನಿಸಿದ್ದೂ ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next