ನವದೆಹಲಿ: ಚುನಾವಣೆಯಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಅಲ್ಲದೆ, ಇದು ಶಾಸಕಾಂಗ ನೀತಿಯ ವಿಷಯವಾಗಿದೆ ಎಂದು ಹೇಳಿದೆ.
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾ. ಪಿ.ಎಸ್.ನರಸಿಂಹ ಮತ್ತು ನ್ಯಾ. ಜೆ.ಬಿ.ಪರ್ಡಿವಾಲಾ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಅನೇಕ ಕಾರಣಗಳಿಂದ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಅಂತಹ ಆಯ್ಕೆಯನ್ನು ನೀಡುವ ಮೂಲಕ ಪ್ರಜಾಪ್ರಭುತ್ವದ ಹಾದಿಯನ್ನು ಮುಂದುವರಿಸಬಹುದೇ ಎಂಬುದು ಸಂಸತ್ತಿನ ಇಚ್ಛೆಯಾಗಿದೆ ಎಂದು ಹೇಳಿದೆ.
ಚುನಾವಣೆಯಲ್ಲಿ ಅಭ್ಯರ್ಥಿಯು ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಇರುವ 1951ರ ಪ್ರಜಾ ಪ್ರಾತಿನಿಧಿಕ ಕಾಯ್ದೆಯ ಸೆಕ್ಷನ್ 33(7) ಅನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು.