Advertisement

ಸಿಎಎ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ; ಕೇಂದ್ರಕ್ಕೆ ನಾಲ್ಕು ವಾರ ಗಡುವು

09:23 AM Jan 23, 2020 | Mithun PG |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ತಡೆಹಿಡಿಯಲು ನಿರಾಕರಿಸಿದ್ದು, ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

Advertisement

ಇನ್ನು, ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ಹಸ್ತಾಂತರ ಮಾಡುವ ಬಗ್ಗೆ ಸುಪ್ರೀಂಕೋರ್ಟ್​ ಸುಳಿವು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಲಾಗಿದೆ. ಅಲ್ಲದೆ, ಸಿಎಎ ವಿಚಾರದಲ್ಲಿ ಯಾವುದೆ ಆದೇಶ ನೀಡದಂತೆ ಹೈಕೋರ್ಟ್​​ಗಳಿಗೆ ಸೂಚನೆ ನೀಡಿದೆ.

ನಾಲ್ಕು ವಾರಗಳು ಕಳೆದ ನಂತರ ಎಲ್ಲಾ 143 ಅರ್ಜಿಗಳನ್ನು ಪ್ರತಿದಿನ ವಿಚಾರಣೆ ನಡೆಸಲು ಸಮಯ ನಿಗದಿಪಡಿಸಲಾಗುವುದು, ಕೇಂದ್ರ ಸರ್ಕಾರದಿಂದ ಉತ್ತರ ಬರುವವರೆಗೆ ಕಾಯ್ದೆಗೆ ತಡೆಯೊಡ್ಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಎಲ್ಲಾ 143 ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿತು. ಇದರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿರುವ ಅರ್ಜಿಗಳು ಸಹ ಇವೆ.ಮಾತ್ರವಲ್ಲದೆ  ಹಲವಾರು ರಾಜಕೀಯ ಪಕ್ಷಗಳು ಕೂಡ ಇದ್ದು – ಕಾಂಗ್ರೆಸ್, ಡಿಎಂಕೆ, ಸಿಪಿಐ, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಥವಾ ಐಯುಎಂಎಲ್, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಮತ್ತು ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಯ್ಯಮ್  ಮುಂತಾದವು ಸೇರಿದ್ದವು.

ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಸರ್ಕಾರಕ್ಕೆ 143 ಅರ್ಜಿಗಳಲ್ಲಿ 60 ಅರ್ಜಿಗಳು ಬಂದಿವೆ. ಇವುಗಳಿಗೆಲ್ಲಾ ಉತ್ತರಿಸಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ಬೇಕು ಎಂದು ಕೇಳಿಕೊಂಡರು.  ಈ ಸಂದರ್ಭದಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್, ಸಿಎಎ ಪ್ರಕ್ರಿಯೆಗಳಿಗೆ ತಡೆ ತರಬೇಕು ಮತ್ತು ಸದ್ಯದ ಮಟ್ಟಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು

Advertisement

ಇದಕ್ಕೆ ಉತ್ತರಿಸಿದ ನ್ಯಾಯಪೀಠ, ಕೇಂದ್ರದಿಂದ ಪ್ರತಿಕ್ರಿಯೆ ಬರದ ಹೊರತು ಸಿಎಎಗೆ ತಡೆ ತರುವುದಿಲ್ಲ ಎಂದು ಹೇಳಿತು. ಅಲ್ಲದೆ ಅಸ್ಸಾಂ ಮತ್ತು ತ್ರಿಪುರಾಗಳಿಂದ ಬಂದಿರುವ ಸಿಎಎ ವಿರೋಧಿ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next