ನವದೆಹಲಿ: ಚುನಾವಣಾ ಆಯುಕ್ತರನ್ನಾಗಿ ಅರುಣ್ ಗೋಯಲ್ ಅವರ ನೇಮಕ ಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಖಡಕ್ ಪ್ರಶ್ನೆಗಳನ್ನು ಹಾಕಿದೆ.
ಗೋಯಲ್ ನೇಮಕ ಕುರಿತ ಫೈಲ್ ಅನ್ನು ತಮಗೆ ಸಲ್ಲಿಸುವಂತೆ ಬುಧವಾರವೇ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಸೂಚಿಸಿತ್ತು. ಅದರಂತೆ, ಗುರುವಾರ ಫೈಲ್ ಪರಿ ಶೀಲಿಸಿದ ನ್ಯಾಯಪೀಠ, “ಇದು ಯಾವ ರೀತಿಯ ಮೌಲ್ಯಮಾಪನ? ಈ ಫೈಲ್ ಇಲಾಖೆ ಯೊಳಗೆ 24 ಗಂಟೆಯೂ ಸುತ್ತಿಲ್ಲ. ಅಂದರೆ ಮಿಂಚಿನ ವೇಗದಲ್ಲಿ ಈ ನೇಮ ಕಾತಿ ನಡೆದಿದೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಎಜಿ ವೆಂಕಟರಮಣಿ, “ದಯವಿಟ್ಟು ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರವನ್ನು ಪೂರ್ಣವಾಗಿ ಗಮನಿಸಿಯೇ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಬೇಕು’ ಎಂದರು.
ಇದಕ್ಕೆ ನ್ಯಾ.ಅಜಯ್ ರಸ್ತೋಗಿ ಅವರು, “ನೀವು ಕೋರ್ಟ್ ಹೇಳುವು ದನ್ನು ಸರಿಯಾಗಿ ಆಲಿಸಿ, ನಮ್ಮ ಪ್ರಶ್ನೆಗೆ ಉತ್ತರಿಸಿ. ನಾವು ಚುನಾವಣಾ ಅಧಿಕಾರಿಯ ಬಗ್ಗೆ ಮಾತನಾಡುತ್ತಿಲ್ಲ, ನೇಮಕ ಪ್ರಕ್ರಿಯೆ ಬಗ್ಗೆ ಮಾತಾಡುತ್ತಿದ್ದೇವೆ’ ಎಂದರು. ಇದಕ್ಕೆ ಎಜಿ ಪ್ರತಿಕ್ರಿಯಿಸಿ, “ನಾವು ಎಲ್ಲ ನೇಮಕಗಳನ್ನೂ ಅನುಮಾನ ದಿಂದಲೇ ನೋಡಿದರೆ, ಅದು ಸಂಸ್ಥೆಯ ಘನತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ, ಈ ಕುರಿತು ಇಂದು ನಾವು ಚರ್ಚಿಸುವುದು ಬೇಡ’ ಎಂದರು. ಚುನಾವಣಾ ಆಯುಕ್ತರ ನೇಮಕ ಕುರಿತ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಿತು.