ನವದೆಹಲಿ : ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್.ಪಿ.ರವಿಚಂದ್ರನ್ ಸೇರಿ ಆರು ಮಂದಿಯನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.ಅವಧಿಗೂ ಮುನ್ನ ಬಿಡುಗಡೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎ.ಜಿ. ಪೆರಾರಿವಾಲನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಲ್ಲರ ವಿಷಯದಲ್ಲಿ ಅನ್ವಯಿಸುತ್ತದೆ ಎಂದು ಹೇಳಿ, ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಾಯಸ್ ಮತ್ತು ರವಿಚಂದ್ರನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಪೀಠವು ಆದೇಶ ನೀಡಿದೆ.
ರಾಜೀವ್ ಗಾಂಧಿ ಮತ್ತು ಇತರ 21 ಜನರ ಹತ್ಯೆಗೆ ಕಾರಣವಾಗಿದ್ದ ಬಾಂಬ್ ದಾಳಿಯ ಸ್ಥಳದಲ್ಲಿ ಹಾಜರಿದ್ದ ಪ್ರಕರಣದಲ್ಲಿ ಹೆಸರಿಸಲಾದ ಪ್ರಮುಖ ಆರೋಪಿಗಳು ಸಲ್ಲಿಸಿದ ಮನವಿಯ ವಿಚಾರಣೆಯ ವೇಳೆ ‘ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದಲ್ಲಿ ಎಲ್ಲ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು’ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ, ಮೇ 18 ರಂದು ಸುಪ್ರೀಂ ಕೋರ್ಟ್ 30 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದ ಪೆರಾರಿವಾಲನ್ ನನ್ನು ಬಿಡುಗಡೆ ಮಾಡಲು ಆದೇಶ ನೀಡಿತ್ತು.
Related Articles
ಪ್ರಕರಣದ ಹಿನ್ನೆಲೆ
1991,ಮೇ 21ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಸಮಾವೇಶದಲ್ಲಿ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್ ಗಾಂಧಿಯವರನ್ನು ಹತ್ಯೆ ಮಾಡಿದ್ದಳು.
1998 ರಲ್ಲಿ ಹತ್ಯೆ ಪ್ರಕರಣದಲ್ಲಿ 25 ಮಂದಿ ಆರೋಪಿಗಳಿಗೆ ಟಾಡಾ ಕೋರ್ಟ್ ನಲ್ಲಿ ಶಿಕ್ಷೆಯಾಗಿತ್ತು. 19 ಮಂದಿಯನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತ್ತು. ನಾಲ್ಕು ಮಂದಿ ಅಪರಾಧಿಗಲಾದ ಪೆರಿವಾಲನ್, ಶ್ರೀಹರನ್, ಸಂತನ್ ಮತ್ತು ನಳಿನಿಗೆ ಮರಣ ದಂಡನೆ ವಿಧಿಸಲಾಗಿತ್ತು. 2000 ರಲ್ಲಿ ನಳಿನಿ ಶಿಕ್ಷೆಯನ್ನು ಜೇವಾವಧಿಯನ್ನಾಗಿ ಬದಲಾಯಿಸಲಾಗಿತ್ತು.2014 ರಲ್ಲಿ ಪೆರಿವಾಲನ್ ಶಿಕ್ಷೆಯನ್ನು ಜೀವಾವಧಿಯನ್ನಾಗಿ ಬದಲಾಯಿಸಲಾಗಿತ್ತು.
2018 ರಲ್ಲಿ ಎಐಎಡಿಎಂ ಕೆ ಸರಕಾರ ಏಳು ಮಂದಿ ಆರೋಪಿಗಳ ಬಿಡುಗಡೆಗೆ ಮುಂದಾಗಿತ್ತು. ಆದರೆ ರಾಜ್ಯಪಾಲರು ಅಧಿಕಾರಿಗಳಿಗೆ ಅಪರಾಧಿಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಮದ್ರಾಸ್ ಹೈಕೋರ್ಟ್ ಕೂಡ ಅವಧಿ ಪೂರ್ವ ಬಿಡುಗಡೆಗಾಗಿ ಪೆರಿವಾಲನ್, ನಳಿನಿ ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿತ್ತು.