Advertisement

Cauvery: ಸುಪ್ರೀಂಕೋರ್ಟ್‌ ಆದೇಶ- ಯಾರು ಏನೆಂದರು?

11:05 PM Sep 21, 2023 | Team Udayavani |

ನಾವು ಒದಗಿಸಿರುವ ಅಂಕಿ-ಅಂಶಗಳ ಆಧಾರದ ಮೇಲೆ ಸುಪ್ರೀಂಕೋರ್ಟ್‌ ಆದೇಶ ಕೊಡುತ್ತದೆ. ಸರಿಯಾದ ರೀತಿಣಯಲ್ಲಿ ಹೋಂವರ್ಕ್‌ ಮಾಡದೆಯೇ ಕೋರ್ಟ್‌ ಮೆಟ್ಟಿ
ಲೇರಿರುವುದು ರುಜುವಾತಾಗಿದೆ. ಕಾಂಗ್ರೆಸ್‌ ಮಿತ್ರಪಕ್ಷ ಡಿಎಂಕೆ ಜತೆ ರಾಜ್ಯ ಸರಕಾರ ಮಾತನಾಡಬೇಕೇ ಹೊರತು, ಕೇಂದ್ರದ ಮಧ್ಯಪ್ರವೇಶ ಸರಿಯಲ್ಲ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ವಾಸ್ತವಾಂಶ ಅರಿಯಲು ಅವರೇ ಸಮಿತಿ ಕಳುಹಿಸಿ ಅಧ್ಯಯನ ಮಾಡಿ ತೀರ್ಪು ಕೊಡಲು ಮನವಿ ಮಾಡಲಿ.
– ಬಿ.ಎಸ್‌. ಯಡಿಯೂರಪ್ಪ , ಮಾಜಿ ಸಿಎಂ

Advertisement

ಸುಪ್ರೀಂಕೋರ್ಟ್‌ ಆದೇಶ ದುರದೃಷ್ಟಕರ. ಮತ್ತೂಮ್ಮೆ ಸುಪ್ರೀಂಕೋರ್ಟ್‌ಗೆ ವಸ್ತುಸ್ಥಿತಿ ಅರ್ಥ ಮಾಡಿಸಬೇಕು. ಕುಡಿಯುವ ನೀರು ಉಳಿಸಿಕೊಳ್ಳಲು ಹೋರಾಟ ಮುಂದುವರಿಸಲಿ. ನಮಗೆ ರಾಜಕಾರಣ ಮಾಡಲು ಇಷ್ಟವಿಲ್ಲ. ಈಗಾಗಲೇ ನಷ್ಟವಾಗಿರುವ ಪ್ರತಿ ಎಕ್ರೆ ಬೆಳೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಘೋಷಿಸಬೇಕು.
– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

ಪೊಲೀಸರನ್ನು ಮುಂದಿಟ್ಟುಕೊಂಡು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುವ ಬದಲು ಬಂಗಾರಪ್ಪರಂತೆ ತೀರ್ಮಾನ ಮಾಡಿ, ಇಡೀ ಕರ್ನಾಟಕದ ಜನರು ನಮ್ಮ ಸಿಎಂ ಪರ ನಿಲ್ಲುತ್ತೇವೆ. ಕದ್ದು ಮುಚ್ಚಿ ನೀರು ಬಿಟ್ಟರೆ ಸಹಿಸುವುದಿಲ್ಲ. ಜನರು ಭುಗಿಲೇಳುತ್ತಾರೆ. ಕಾನೂನು ಕೈಗೆತ್ತಿಕೊಂಡರೂ ಸರಿ ನಾವೇ ಹೋರಾಟಕ್ಕಿಳಿಯುತ್ತೇವೆ.
– ಟಿ.ಎ. ನಾರಾಯಣ ಗೌಡ, ಕರವೇ ಅಧ್ಯಕ್ಷ

ಸಂಕಷ್ಟ ಸೂತ್ರ ರಚನೆಯಾಗುವವರೆಗೂ ನೀರು ಬಿಡುವ ಆದೇಶ ಒಪ್ಪಲಾಗಲ್ಲ, ತಮಿಳುನಾಡಿಗೆ ಹಿಂಗಾರು ಮಳೆ ಬರುವುದರಿಂದ ಕರ್ನಾಟಕ ನೀರು ಖಾಲಿ ಮಾಡಿಕೊಳ್ಳಲಾಗಲ್ಲ ಎಂಬುದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ನೀರು ಹರಿಸುವುದನ್ನು ತತ್‌ಕ್ಷಣ ನಿಲ್ಲಿಸಬೇಕು. ಕಾವೇರಿ ವಿಚಾರದಲ್ಲಿ ರಾಜಕೀಯ ಒತ್ತಡಕ್ಕೆ ಸರಕಾರ ಸಿಲುಕಬಾರದು.
– ಕುರುಬೂರು ಶಾಂತಕುಮಾರ್‌, ಕರ್ನಾಟಕ ಜಲಸಂರಕ್ಷಣ ಸಮಿತಿ

ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟ ಸ್ಥಿತಿ ಎದುರಾಗಿದೆ. ಕೇಂದ್ರ ಸರಕಾರವು ಪರಿಣಿತರ ತಂಡ ಕಳುಹಿಸಿ, ವಾಸ್ತವಾಂಶಗಳ ಪರಿಶೀಲನೆಗೆ ಮುಂದಾಗಬೇಕು. ಪರಿಣಿತರ ತಂಡ ಖುದ್ದು ಪರಿಶೀಲಿಸಿದ ಬಳಿಕವಷ್ಟೇ ಮುಂದಿನ ಹೆಜ್ಜೆ ನಿರ್ಧರಿಸಬಹುದು. ಕೇಂದ್ರದ ಮಧ್ಯಪ್ರವೇಶಕ್ಕೆ ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ ಸಹಿತ ಎಲ್ಲರೂ ಪ್ರಯತ್ನಿಸಬೇಕು.
– ಎಂ.ಬಿ. ಪಾಟೀಲ್‌, ಕೈಗಾರಿಕಾ ಸಚಿವ

Advertisement

ಕಾಂಗ್ರೆಸ್‌ ಪಕ್ಷಕ್ಕೆ ತಮಿಳುನಾಡಿನ ಜತೆ ರಾಜಕೀಯ ಹಿತಾಸಕ್ತಿ ಇರುವುದರಿಂದಲೇ ರಾಜ್ಯಕ್ಕೆ ಕಾವೇರಿ ವಿಷಯದಲ್ಲಿ ಅನ್ಯಾಯವಾಗಿದೆ. ಐಎನ್‌ಡಿಐಎ ಮೈತ್ರಿಕೂಟಕ್ಕೆ ಶಕ್ತಿ ತುಂಬಲು ರಾಜ್ಯದ ಹಿತ ಬಲಿ ಕೊಟ್ಟಿದೆ. ನೀರಾವರಿ ಬಗ್ಗೆ ಕನಿಷ್ಠ ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಮೌನ ಅಚ್ಚರಿ ತಂದಿದೆ. ತುರ್ತಾಗಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಸಮಿತಿ, ಪ್ರಾಧಿಕಾರದ ಆದೇಶ ಪಾಲಿಸಿದರೂ ಈ ರೀತಿ ಆದೇಶ ಆಗಿದೆ. ಈಗ ನೀರು ಬಿಡುವ ಪರಿಸ್ಥಿತಿಯಲ್ಲಿಲ್ಲ. ನಾವು ಒಳ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಇಲ್ಲ. ರಾಜಕೀಯ ಕಾರಣಕ್ಕೆ ಆಪಾದಿಸಬಹುದು. ಮಧ್ಯಸ್ಥಿಕೆ ವಹಿಸಲು ಸೋನಿಯಾ ಗಾಂಧಿಗೆ ಯಾವ ಸಾಂವಿಧಾನಿಕ ಅಧಿಕಾರ ಇದೆ. ನಮ್ಮ ಸರಕಾರ ರಾಜ್ಯದ ಹಿತವನ್ನು ಖಂಡಿತವಾಗಿ ಕಾಪಾಡುತ್ತೇವೆ.
– ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

ರಾಜ್ಯದ ಜನರ ಹಿತ ರಕ್ಷಣೆಗಾಗಿ ನೀರು ಬಿಡುವುದಿಲ್ಲ ಎನ್ನುವ ಕಠಿನ ನಿರ್ಧಾರ ಮಾಡಿ ಮುಖ್ಯಮಂತ್ರಿಗಳು ಜನರ ಪಾಲಿಗೆ ಹೀರೋ ಆಗಬೇಕು. ಕೂಡಲೇ ಅಧಿವೇಶನ ಕರೆದು ಅಧ್ಯಾದೇಶ ತರಬೇಕು.
– ಮುಖ್ಯಮಂತ್ರಿ ಚಂದ್ರು, ಆಮ್‌ ಆದ್ಮಿ ಪಕ್ಷದ ಮುಖಂಡ

ಸುಪ್ರೀಂಕೋರ್ಟ್‌ ಆದೇಶದ ವಿಚಾರದಲ್ಲಿ ಸಿಎಂ, ಡಿಸಿಎಂ ಯಾವ ನಿರ್ಧಾರವನ್ನೂ ತಿಳಿಸಿಲ್ಲ. ರಾಜ್ಯಸಭೆ, ಲೋಕಸಭಾ ಸದಸ್ಯರು ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಧೈರ್ಯ ತೋರಲಿ. ಬೆಂಗಳೂರಿನಲ್ಲಿರುವ ತಮಿಳರನ್ನು ಅವರ ಸಿಎಂ ಸ್ಟಾಲಿನ್‌ ಕರೆಸಿಕೊಳ್ಳಲಿ. ನಮ್ಮ ಸಿನೆಮಾ ನಟರು ಎಲ್ಲೆಲ್ಲೋ ಇದ್ದಾರೆ, ಸ್ವಲ್ಪ ಕೆಳಗಿಳಿದು ಬರಲಿ. ರಜನಿಕಾಂತ್‌ ಕರ್ನಾಟಕದ ಪರವೋ, ತಮಿಳುನಾಡಿನ ಪರವೋ ತಿಳಿಸಲಿ. ಎರಡು ದಿನದಲ್ಲಿ ನಮ್ಮ ಹೋರಾಟದ ಬಗ್ಗೆ ತಿಳಿಸುತ್ತೇವೆ.
– ವಾಟಾಳ್‌ ನಾಗರಾಜ್‌, ವಾಟಾಳ್‌ ಪಕ್ಷದ ಮುಖಂಡ

ಸುಪ್ರೀಂಕೋರ್ಟ್‌ ತೀರ್ಪಿನಿಂದ ಅನ್ಯಾಯ ಮತ್ತು ಆಘಾತವಾಗಿದೆ. ಈ ಆದೇಶದಂತೆ ದಿನವೂ ತಮಿಳುನಾಡಿಗೆ 5 ಸಾವಿರ ಕ್ಯುಸೆಕ್‌ ನೀರು ಬಿಟ್ಟರೆ ನೀರಾವರಿ ಚಟುವಟಿಕೆಗೆ ನೀರು ಕೊಡಲಾಗುವುದಿಲ್ಲ. ಕುಡಿಯುವ ನೀರಿಗೆ ಸಂಗ್ರಹ ಇಟ್ಟುಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರ ಪರವಾಗಿ ಸರಕಾರ ನಿಲ್ಲಬೇಕು. ರೈತರು ಆತ್ಮಹತ್ಯೆ ದಾರಿ ಹಿಡಿಯುವ ಮೊದಲೇ ನಷ್ಟ ಪರಿಹಾರ ಘೋಷಿಸಬೇಕು.
– ಸುಮಲತಾ, ಮಂಡ್ಯ ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next