ಹೊಸದಿಲ್ಲಿ: 1992ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಆ. 31ರೊಳಗೆ ಪ್ರಕಟಿಸುವಂತೆ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮಾಜೀ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ, ಕೇಂದ್ರದ ಮಾಜೀ ಸಚಿವರುಗಳಾಗಿರುವ ಮುರಳೀ ಮನೋಹರ ಜೋಷಿ, ಉಮಾ ಭಾರತಿ ಸಹಿತ ಹಲವರು ಆರೋಪಿಗಳಾಗಿರುವ ಹೈಪ್ರೊಫೈಲ್ ಪ್ರಕರಣವಿದು.
ಕಳೆದ ವರ್ಷ ಜುಲೈಯಲ್ಲಿ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಇನ್ನು 9 ತಿಂಗಳಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಬೇಕೆಂದು ಲಕ್ನೋ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. ಎಪ್ರಿಲ್ – ಮೇ ಅಂತ್ಯಕ್ಕೆ ಅಂತಿಮ ತೀರ್ಪು ಹೊರಬೀಳಬೇಕಿತ್ತು.
ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಗಡುವನ್ನು ವಿಸ್ತರಿಸಬೇಕೆಂದು ವಿಶೇಷ ನ್ಯಾಯಾಲಯ ನ್ಯಾಯಾಧೀಶರು, ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಹೊಸ ಗಡುವನ್ನು ವಿಧಿಸಿದೆ.
ಜತೆಗೆ, ವೀಡಿಯೋ ಕಾನ್ಫರೆನ್ಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿಚಾರಣೆ ನಡೆಸುವಂತೆ ಸೂಚಿಸಿದೆ. ಈ ನಡುವೆ ಉತ್ತರ ಪ್ರದೇಶ ಸರಕಾರ ರಾಮ ಮಂದಿರ ನಿರ್ಮಾಣ ಪೂರ್ವಭಾವಿ ಕಾಮಗಾರಿಗಳಿಗೆ ಅನುಮತಿ ನೀಡಿದೆ.