ನವದೆಹಲಿ: ಸುಪ್ರೀಂಕೋರ್ಟ್‌ನ ಹೊಸ ನ್ಯಾಯಮೂರ್ತಿಗಳಾಗಿ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ.ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ನ್ಯಾಯವಾದಿ ಕಲ್ಪಾತಿ ವೆಂಕಟರಮಣನ್ ವಿಶ್ವನಾಥನ್ ಶುಕ್ರವಾರ ಪ್ರಮಾಣ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಬ್ಬರಿಗೆ ಪ್ರಮಾಣ ವಚನ ಬೋಧಿಸಿದರು. ಸಿಜೆಐ ಸೇರಿದಂತೆ 34 ನ್ಯಾಯಮೂರ್ತಿಗಳ ಸಂಖ್ಯೆ ಸದ್ಯಕ್ಕೆ ಪೂರ್ಣಗೊಂಡಿದ್ದರೂ, ಮುಂದಿನ ತಿಂಗಳು ಮೂವರು ನ್ಯಾಯಮೂರ್ತಿಗಳು ನಿವೃತ್ತರಾಗಲಿದ್ದಾರೆ.
ನ್ಯಾ.ಕೆ.ಎಂ.ಜೋಸೆಫ್ ಜೂ.16, ನ್ಯಾ.ಅಜಯ ರಸ್ತೋಗಿ ಜೂ.16 ಮತ್ತು ನ್ಯಾ.ವಿ.ರಾಮಸುಬ್ರಮಣಿಯನ್ ಜೂ.29, ನ್ಯಾ.ಕೃಷ್ಣ ಮುರಾರಿ ಜೂ.8ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ, ಶುಕ್ರವಾರ ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ಕಾರ್ಯಕಲಾಪದಲ್ಲಿ ಭಾಗವಹಿಸಿದ್ದರು. ಮೇ 22ರಿಂದ ಜು.2ರ ವರೆಗೆ ಬೇಸಗೆ ರಜೆ ಇರಲಿದೆ.
ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮದಲ್ಲಿ ಮುಂದಿನ ತಿಂಗಳು ನಿವೃತ್ತಿಯಾಗಲಿರುವ ಮೂವರು ನ್ಯಾಯಮೂರ್ತಿಗಳ ಕಾರ್ಯ ವೈಖರಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ವಕೀಲರ ಕಡೆಯಿಂದ ನ್ಯಾಯಮೂರ್ತಿಯಾಗಿರುವ ವಿಶ್ವನಾಥನ್ ಇಂಥ ಹೆಗ್ಗಳಿಕೆಗೆ ಭಾಜನಾರಾಗಿರುವ ಮೂರನೇಯವರು.