ನವದೆಹಲಿ:ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಗೈರು ಹಾಜರಾದ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಾದ ಸಿಎಸ್ ಕರ್ಣನ್ ವಿರುದ್ಧ ಸುಪ್ರೀಂಕೋರ್ಟ್ ಶುಕ್ರವಾರ ವಾರೆಂಟ್ ಜಾರಿ ಮಾಡಿದ್ದ ಬೆನ್ನಲ್ಲೇ, ತನ್ನ ಆರೋಪಕ್ಕೆ ಬದ್ಧನಾಗಿರುವುದಾಗಿ ಪುನರುಚ್ಚರಿಸಿರುವ ನ್ಯಾ.ಕರ್ಣನ್, ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಇಂತಹ ಆದೇಶ ನೀಡುವ ಅಧಿಕಾರ ಸುಪ್ರೀಂಕೋರ್ಟ್ ಗೆ ಇಲ್ಲ ಎಂದು ಹೇಳುವ ಮೂಲಕ ಸುಪ್ರೀಂಗೆ ಸೆಡ್ಡು ಹೊಡೆದಿದ್ದಾರೆ.
ಸುಪ್ರೀಂಕೋರ್ಟ್ ಮಾಸ್ಟರ್ ಅಲ್ಲ ಮತ್ತು ಹೈಕೋರ್ಟ್ ಸೇವಕನೂ ಅಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ನ್ಯಾ.ಕರ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನ್ನ ಆರೋಪವನ್ನು ಬಲವಾಗಿ ಸಮರ್ಥಿಸಕೊಂಡ ಹಾಲಿ ನ್ಯಾಯಾಧೀಶ, ನಾನು ಯಾವುದೇ ಅಪರಾಧ ಎಸಗಿಲ್ಲ, ನ್ಯಾಯಾಂಗ ವ್ಯವಸ್ಥೆಯೊಳಗಿನ ಹುಳುಕಿನ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಜಸ್ಟಿಸ್ ಕರ್ಣನ್ ವಿರುದ್ಧದ ಆರೋಪಿತ ಅನುಚಿತ ವರ್ತನೆಯ ಪ್ರಕರಣದ ವಿಚಾರಣೆಯನ್ನು ಭಾರತದ ಶ್ರೇಷ್ಠ ನ್ಯಾಯಮೂರ್ತಿ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ನಡೆಸಲಿದೆ.
ಜಸ್ಟಿಸ್ ಕರ್ಣನ್ ಅವರು ದೇಶದ ಹಲವು ಹಾಲಿ ಹಾಗೂ ಮಾಜಿ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.