ನವದೆಹಲಿ:ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕಾನೂನು ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಸುಪ್ರೀಂಕೋರ್ಟ್ ಸೋಮವಾರ(ನವೆಂಬರ್ 28) ಆಕ್ಷೇಪ ವ್ಯಕ್ತಡಿಸಿದೆ.
ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಯನ್ನು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂಬುದಾಗಿ ಸೂಚ್ಯವಾಗಿ ಹೇಳಿರುವ ಸುಪ್ರೀಂಕೋರ್ಟ್, ತನ್ನ ಮೀಸಲಾತಿಯ ವಿಷಯವನ್ನು ಸ್ಪಷ್ಟಪಡಿಸದೇ ಹೆಸರುಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:ಸೋಶಿಯಲ್ ಮೀಡಿಯಾದಲ್ಲಿ ನಟಿ ಅನಸೂಯ ಅವರ ಆಶ್ಲೀಲ ಫೋಟೋ ಪೋಸ್ಟ್: ಆರೋಪಿ ಅರೆಸ್ಟ್
ಉನ್ನತ ಸ್ಥಾನದಲ್ಲಿರುವ ಯಾರೋ ಒಬ್ಬರು (ಕಿರಣ್ ರಿಜಿಜು), ನೀಡಿರುವ ಹೇಳಿಕೆಯಂತೆ ಅದು ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಯಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಆಶ ಓಕ್ಲಾ ಅವರ ದ್ವಿಸದಸ್ಯ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
Related Articles
ಉನ್ನತ (ಸುಪ್ರೀಂ, ಹೈಕೋರ್ಟ್) ಕೋರ್ಟ್ ಗಳಲ್ಲಿ ನ್ಯಾಯಾಧೀಶರ ನೇಮಕ ಮಾಡಿಕೊಳ್ಳುವ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಸಚಿವ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಸ್ತುತ ಇರುವ ಕೊಲಿಜಿಯಂ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದರು.
1991ಕ್ಕೂ ಮೊದಲು ನ್ಯಾಯಾಧೀಶರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುತ್ತಿತ್ತು. ಆದರೆ ಇದೀಗ ಕೊಲಿಜಿಯಂ ನ್ಯಾಯಾಧೀಶರ ನೇಮಕ ಮಾಡುತ್ತಿದೆ ಎಂದು ರಿಜಿಜು ಹೇಳಿದ್ದರು.
ಮಿಸ್ಟರ್ ಅಟಾರ್ನಿ ಜನರಲ್ ರವರೇ, ನಾನು ಎಲ್ಲಾ ಪತ್ರಿಕಾ ವರದಿಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಂದರ್ಶನದಲ್ಲಿ ಈ ವಿಷಯವನ್ನು ಹೊರಹಾಕಿದ್ದಾರೆ. ನಾನು ಇದರ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಾರೆ. ಒಂದು ವೇಳೆ ಏನಾದರು ಮಾಡಬೇಕಿದ್ದರೆ, ಆ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಜಸ್ಟೀಸ್ ಕೌಲ್ ಅವರು ಕೇಂದ್ರ ಸರ್ಕಾರ ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಈ ವಿಷಯವನ್ನು ಪರಿಹರಿಸಿ, ಈ ವಿಚಾರದಲ್ಲಿ ನ್ಯಾಯಾಂಗವೇ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬೇಡಿ ಎಂದು ಸುಪ್ರೀಂ ಪೀಠ ನಿರ್ದೇಶನ ನೀಡಿದೆ. ಕೆಲವೊಮ್ಮೆ ಮಾಧ್ಯಮಗಳ ವರದಿಯೂ ತಪ್ಪಾಗಿರುತ್ತದೆ ಎಂದು ಸಾಲಿಸಿಟರ್ ಜನರಲ್ ಕೇಂದ್ರದ ಪರ ಸಮಜಾಯಿಷಿ ನೀಡಿದರು.
ಸುಪ್ರೀಂಕೋರ್ಟ್ ಕೊಲಿಜಿಯಂ ಉನ್ನತ ನ್ಯಾಯಾಲಯಕ್ಕೆ ಶಿಫಾರಸು ಮಾಡಿದ ಹೆಸರುಗಳನ್ನು ಕೇಂದ್ರ ಸರ್ಕಾರ ಕ್ಲಿಯರ್ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ನ ಭಾವನೆಗಳನ್ನು ಸರ್ಕಾರಕ್ಕೆ ತಿಳಿಸುವಂತೆ ಅಟಾರ್ನಿ ಜನರಲ್ ಗೆ ಪೀಠ ಸೂಚನೆ ನೀಡಿದೆ.
“ವಾಸ್ತವ ಏನೆಂದರೆ ನ್ಯಾಯಾಧೀಶರ ಹೆಸರನ್ನು ಕ್ಲಿಯರ್ ಮಾಡುತ್ತಿಲ್ಲ. ಹೀಗಾದರೆ ವ್ಯವಸ್ಥೆ ಹೇಗೆ ನಡೆಯುತ್ತದೆ? ಕಳೆದ ಒಂದೂವರೆ ವರ್ಷದಿಂದ ಕೆಲವು ಹೆಸರುಗಳು ಬಾಕಿ ಉಳಿದಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಕೆಲವೊಮ್ಮೆ ಕೊಲಿಜಿಯಂ ಶಿಫಾರಸು ಮಾಡಿರುವ ಪಟ್ಟಿಯಲ್ಲಿನ ಹೆಸರುಗಳನ್ನು ಆಯ್ಕೆ ಮಾಡುತ್ತದೆ, ಆದರೆ ಉಳಿದವರ ಹೆಸರುಗಳನ್ನು ಕ್ಲಿಯರ್ ಮಾಡುವುದಿಲ್ಲ. ಇದರಿಂದಾಗಿ ಸೀನಿಯಾರಿಟಿಯನ್ನು (ಹಿರಿತನ) ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದೀರಿ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.