ನವದೆಹಲಿ: ದೆಹಲಿಯ ಇಡೀ ಆಡಳಿತಾತ್ಮಕ ನಿಯಂತ್ರಣವು ಕೇಂದ್ರ ಸರ್ಕಾರದ ಕೈಯ್ಯಲ್ಲೇ ಇರಬೇಕೆಂದರೆ, ದೆಹಲಿಗೆ ಚುನಾಯಿತ ಸರ್ಕಾರ ಇರುವುದಾದರೂ ಏತಕ್ಕೆ?
ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಾಡಿರುವ ಪ್ರಶ್ನೆ. ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಕುರಿತಾಗಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಇಂಥ ಪ್ರಶ್ನೆ ಹಾಕಿದೆ.
ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಕೇಂದ್ರ ಸರ್ಕಾರಕ್ಕೆ ಆ ಪ್ರದೇಶದ ಆಡಳಿತ ನಡೆಸುವ ಇಚ್ಛೆಯಿದೆ ಎಂಬ ಕಾರಣಕ್ಕಾಗಿಯೇ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲಾಗಿರುತ್ತದೆ. ಹೀಗಾಗಿಯೇ, ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ನಾಗರಿಕ ಸೇವೆಗಳ ಅಧಿಕಾರಿಗಳು ಮತ್ತು ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳೇ ನಿರ್ವಹಿಸುತ್ತವೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಎಲ್ಲವೂ ಕೇಂದ್ರ ಸರ್ಕಾರದ ಇಚ್ಛೆಯಂತೆಯೇ ನಡೆಯಬೇಕು ಎಂದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರವಿದ್ದು ಏನು ಪ್ರಯೋಜನ’ ಎಂದು ಪ್ರಶ್ನಿಸಿದ್ದಾರೆ. ಜ.17ರಂದು ವಿಚಾರಣೆ ಮುಂದುವರಿಯಲಿದೆ.