Advertisement

ಐತಿಹಾಸಿಕ ತ್ರಿವಳಿ ತಲಾಖ್‌ ಕುರಿತ ವಿಚಾರಣೆ ಆರಂಭ

02:00 AM May 12, 2017 | Karthik A |

ಹೊಸದಿಲ್ಲಿ: ಮುಸ್ಲಿಮರ ವೈವಾಹಿಕ ಜೀವನಕ್ಕೆ ಇತಿಶ್ರೀ (ವಿಚ್ಛೇದನ) ಹಾಡುವ ತ್ರಿವಳಿ ತಲಾಖ್‌ ಕುರಿತ ಐತಿಹಾಸಿಕ ವಿಚಾರಣೆಯನ್ನು ಐವರು ಸದಸ್ಯರ ಸರ್ವೋಚ್ಚ ನ್ಯಾಯಾಲಯದ‌ ಸಾಂವಿಧಾನಿಕ ಪೀಠ ಗುರುವಾರದಿಂದ ಆರಂಭಿಸಿದೆ. ಈ ಕುರಿತು ಸಲ್ಲಿಕೆಯಾಗಿರುವ 7 ಅರ್ಜಿಗಳನ್ನು ಮುಸ್ಲಿಂ, ಹಿಂದೂ, ಕ್ರೈಸ್ತ, ಪಾರ್ಸಿ, ಸಿಕ್ಖ್  ಪಂಥಕ್ಕೆ ಸೇರಿದ ನ್ಯಾಯಮೂರ್ತಿಗಳು ವಿಚಾರಣೆ ಆರಂಭಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ವಿಚಾರಣೆ ನೇತೃತ್ವ ವಹಿಸಿದ್ದಾರೆ. ವಿಚಾರಣೆ ಆರಂಭದಲ್ಲೇ, ಒಂದು ವೇಳೆ ತ್ರಿವಳಿ ತಲಾಖ್‌ ರದ್ದುಪಡಿಸಿದ್ದೇ ಆದಲ್ಲಿ ಮುಸ್ಲಿಂ ಪುರುಷರಿಗೆ  ಚ್ಛೇದನ ನೀಡಲು ಇರುವ ಅವಕಾಶ ಯಾವುದು ಎಂದು ಪೀಠ ಪ್ರಶ್ನಿಸಿದೆ.

Advertisement

ತ್ರಿವಳಿ ತಲಾಖ್‌ ವಿಚಾರದಲ್ಲಿ 7 ಅರ್ಜಿಗಳನ್ನು ವೈಯಕ್ತಿಕವಾಗಿ ವಿಚಾರಣೆ ನಡೆಸದೇ ಒಟ್ಟಾರೆ ಈ ಪ್ರಕರಣವನ್ನು ಅಧ್ಯಯನ ನಡೆಸಲು ನ್ಯಾಯಪೀಠ ತೀರ್ಮಾನಿಸಿದೆ. ಅದಕ್ಕಾಗಿ ಬೇಸಿಗೆ ರಜಾಕಾಲದಲ್ಲಿ ವಿಚಾರಣೆ ಮುಂದುವರಿಸಲಿದೆ. ವಿಶೇಷವಾಗಿ ಶನಿವಾರ, ರವಿವಾರವೂ ವಿಚಾರಣೆ ನಡೆಸಲಿದೆ. ಅರ್ಜಿಗಳಲ್ಲಿ ಬಹುಪತ್ನಿತ್ವ, ನಿಖಾ ಹಲಾಲಾ ವಿರುದ್ಧವೂ ಆರೋಪಗಳಿವೆ. ಫೇಸ್‌ಬುಕ್‌, ವಾಟ್ಸಾಪ್‌ನಲ್ಲೂ ತಲಾಖ್‌ ನೀಡಿರುವ ಬಗ್ಗೆ ಉಲ್ಲೇಖಗಳಿವೆ. ಜೊತೆಗೆ ತಲಾಖ್‌, ಬಹುಪತ್ನಿತ್ವ, ನಿಖಾ ಹಲಾಲಾ ಸಂವಿಧಾನಕ್ಕೆ ವಿರುದ್ಧ ಎಂದು ದೂರಲಾಗಿದೆ. ಆದರೆ ನ್ಯಾಯಪೀಠ ತ್ರಿವಳಿ ತಲಾಖ್‌ ಕುರಿತಂತೆ ಮಾತ್ರ ವಿಚಾರಣೆ ನಡೆಸಲಾಗುವುದು ಬಹುಪತ್ನಿತ್ವಕ್ಕೂ ತಲಾಖ್‌ಗೂ ಸಂಬಂಧವಿಲ್ಲದಿರುವುದರಿಂದ ಬಹುಪತ್ನಿತ್ವ ತಮ್ಮ ವಿಚಾರಣೆಯ ಭಾಗವಾಗಿರುವುದಿಲ್ಲ ಎಂದು ತಿಳಿಸಿದೆ.

ಮುಸ್ಲಿಂ ಧಾರ್ಮಿಕ ಪದ್ಧತಿ ಪ್ರಕಾರ ತಲಾಖ್‌ ಆಚರಣೆ ಅನಿವಾರ್ಯವೇ? ಇದು ಸಂವಿಧಾನಕ್ಕೆ ವಿರುದ್ಧವಾಗುತ್ತದೆಯೇ? ಮುಸ್ಲಿಂ ಮಹಿಳೆಯರು ಲಿಂಗ ತಾರತಮ್ಯ ಅನುಭವಿಸುತ್ತಿದ್ದಾರಾ? ಎನ್ನುವುದನ್ನು ನ್ಯಾಯಪೀಠ ಪರಿಗಣಿಸಲಿದೆ. ಪ್ರತಿಯೊಬ್ಬ ಅರ್ಜಿದಾರರಿಗೂ 2 ದಿನಗಳ ಕಾಲ ವಾದ ಮಂಡಿಸಲು ಅವಕಾಶ ನೀಡಲಿದೆ.

ಕೇಂದ್ರ ಸರಕಾರದಿಂದಲೂ ವಿರೋಧ: ತ್ರಿವಳಿ ತಲಾಖ್‌ಗೆ ಕೇಂದ್ರ ಸರಕಾರವೂ ವಿರೋಧ ವ್ಯಕ್ತಪಡಿಸಿದೆ. ತಲಾಖ್‌ ಲಿಂಗ ತಾರತಮ್ಯ ಮಾಡುತ್ತದೆ ಎಂದು ಕೇಂದ್ರ ತನ್ನ ಅಭಿಪ್ರಾಯವನ್ನು ನ್ಯಾಯಪೀಠಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ ಪ್ರಧಾನಿ ಮೋದಿ, ಮುಸ್ಲಿಂ ಮಹಿಳೆಯರಿಗೆ ಮನವಿ ಮಾಡಿಕೊಂಡು, ತ್ರಿವಳಿ ತಲಾಖನ್ನು ರಾಜಕೀಯದ ದೃಷ್ಟಿಯಿಂದ ನೋಡಬೇಡಿ ಬದಲಾಗಿ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಲಿಂಗ ತಾರತಮ್ಯವನ್ನು ಗಮನಿಸಿ ನೋಡಿ ಎಂದು ಹೇಳಿದೆ.

– ಸಿಖ್‌, ಪಾರ್ಸಿ, ಮುಸ್ಲಿಂ, ಹಿಂದೂ ಧರ್ಮದ ನ್ಯಾಯಮೂರ್ತಿಗಳಿಂದ ಇಡೀ ಪ್ರಕರಣದ ವಿಚಾರಣೆ.

Advertisement

– ವಿಚಾರಣೆಯನ್ನು ಬರೀ ಅರ್ಜಿಗಳಿಗಷ್ಟೇ ಸೀಮಿತ ಮಾಡದೇ ಒಟ್ಟಾರೆ ಸಮಸ್ಯೆಯ ಕುರಿತು ಅಧ್ಯಯನ.

– ತಲಾಖ್‌ ಮುಸ್ಲಿಮರ ಅನಿವಾರ್ಯ ಧಾರ್ಮಿಕ ಆಚರಣೆಯೇ? ಅದು ಕಾನೂನಿಗೆ ವಿರುದ್ಧವೇ?: ಪರಿಶೀಲನೆ.

ಮುಸ್ಲಿಂ ಸಮುದಾಯದಲ್ಲಿ ಪರ-ವಿರೋಧ ಚರ್ಚೆ
ಪ್ರಕರಣವನ್ನು ಸರ್ವೋಚ್ಚ ನ್ಯಾಯಪೀಠ ವಿಚಾರಣೆಗೆತ್ತಿಕೊಂಡ ನಂತರ ಮುಸ್ಲಿಂ ಸಮುದಾಯದೊಳಗೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಅಖೀಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ, ಇಂತಹ ಕೆಟ್ಟ ಪದ್ಧತಿಗಳು ಇನ್ನಾದರೂ ನಿಲ್ಲಬೇಕು, ಹಲವು ದೇಶಗಳು ಈಗಾಗಲೇ ಇದನ್ನು ನಿಲ್ಲಿಸಿವೆ. ನ್ಯಾಯಾಲಯ ಮುಸ್ಲಿಂ ಮಹಿಳೆಯರ ಘನತೆ ಎತ್ತಿಹಿಡಿಯುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದೆ. ಆದರೆ ಎಐಎಂಎಂಎಂ ಎಂಬ ಸಂಘಟನೆ ನ್ಯಾಯಾಲಯದ ಹಸ್ತಕ್ಷೇಪವನ್ನು ವಿರೋಧಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ತಲಾಖ್‌, ಬಹುಪತ್ನಿತ್ವ, ನಿಖಾ ಹಲಾಲಾ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದನ್ನು ಅವಿರೋಧಿಸಿದೆ. ಮೇಲಿನ ನಿಯಮಗಳನ್ನು ಕುರಾನ್‌ ಅನ್ವಯವೇ ಜಾರಿ ಮಾಡಲಾಗಿದೆ. ಸಂವಿಧಾನದ ಪ್ರಕಾರ, ಇವುಗಳನ್ನು ವಿಚಾರಣೆ ನಡೆಸುವಂತಿಲ್ಲ. ಆದ್ದರಿಂದ ನ್ಯಾಯಪೀಠ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next