ನವದೆಹಲಿ: ಬಿಸಿಸಿಐನ ನೂತನ ಆಡಳಿತ ಮಂಡಳಿಗೆ ಮಾಜಿ ಸಿಎಜಿ ವಿನೋದ್ ಯಾರ್ ಅವರನ್ನು ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್ ಸೋಮವಾರ ನೇಮಕ ಮಾಡಿದೆ.
ಸುಪ್ರೀಂಕೋರ್ಟ್ ರಚಿಸಿರುವ ನಾಲ್ವರ ಸದಸ್ಯರ ಸಮಿತಿಯಲ್ಲಿ ರಾಯ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದು, ಹೆಸರಾಂತ ಇತಿಹಾಸಕಾರ ರಾಮಚಂದ್ರ ಗುಹಾ, ಮಾಜಿ ಕ್ರಿಕೆಟಿಗ ಡಯಾನಾ ಎಡುಲ್ಜಿ ಹಾಗೂ ಐಡಿಎಫ್ ಸಿ ಅಧಿಕಾರಿ ವಿಕ್ರಮ್ ಲಿಮಯೆ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಿಸಿಸಿಐ ಅರ್ಜಿ ವಿಚಾರಣೆ ವೇಳೆ, ಕ್ರೀಡಾ ಸಚಿವಾಲಯದ ಕಾರ್ಯದರ್ಶಿಯನ್ನು ಬಿಸಿಸಿಐನ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬಿಸಿಸಿಐ ಕುರಿತು ಈ ಮೊದಲು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಬಿಸಿಸಿಐನಲ್ಲಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಹುದ್ದೆ ಅಲಂಕರಿಸಬಾರದು ಎಂದು ಹೇಳಿತ್ತು.
ಅಷ್ಟೇ ಅಲ್ಲ ಬಿಸಿಸಿಐಗೆ ಅಮಿತಾಬ್ ಚೌಧರಿ, ಅನಿರುದ್ಧ ಚೌಧರಿಯನ್ನು ಸುಪ್ರೀಂಕೋರ್ಟ್ ಹೆಸರಿಸಿದ್ದು, ಫೆಬ್ರುವರಿ ಮೊದಲ ವಾರ ನಡೆಯಲಿರುವ ಐಸಿಸಿ ಸಭೆಗೆ ವಿಕ್ರಮ್ ಲಿಮಯೆ ಅವರು ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಯುವಂತೆ ನಿರ್ದೇಶನ ನೀಡಿದೆ.