ನವದೆಹಲಿ: ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ 1984ರ ಸಿಖ್ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಸುಪ್ರೀಂಕೋರ್ಟ್ ಮಂಗಳವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಪೂರ್ವ ದೆಹಲಿಯ ತ್ರಿಲೋಕ್ ಪುರಿ ಪ್ರದೇಶದಲ್ಲಿ 1984ರ ಸಿಖ್ ವಿರೋಧಿ ಗಲಭೆಗೆ ಕುಮ್ಮಕ್ಕು ನೀಡಿರುವುದಾಗಿ ಆರೋಪಿಸಲಾಗಿದ್ದು, ಇದೀಗ ಸುಪ್ರೀಂಕೋರ್ಟ್ ದೋಷಮುಕ್ತಗೊಳಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಕರಣದ ಕೆಳ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಒಂಬತ್ತು ಮಂದಿ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಮತ್ತು ಇವರೇ ಘಟನೆಗೆ ಕುಮ್ಮಕ್ಕು ನೀಡಿದವರು ಎಂಬುದನ್ನು ನೇರವಾಗಿ ಗುರುತಿಸುವ ಪ್ರತ್ಯಕ್ಷದರ್ಶಿಗಳು ಕೂಡಾ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವೇದ್ ಪ್ರಕಾಶ್, ತಾರಾ ಚಾಂದ್, ಸುರೇಂದ್ರ ಸಿಂಗ್(ಕಲ್ಯಾಣ್ ಪುರಿ), ಗಣ್ ಶೇನಾನ್, ಹಬೀಬ್, ರಾಮ್ ಶಿರೋಮಣಿ, ಬ್ರಾಮ್ ಸಿಂಗ್, ಸುಬ್ಬಾರ್ ಸಿಂಗ್ ಮತ್ತು ಸುರೇಂದ್ರ ಮುರ್ಟಿ ಸೇರಿದಂತೆ ಒಂಬತ್ತು ಮಂದಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ.