ನವದೆಹಲಿ : ಭೂಮಿ ಮೇಲೆ ಜನಿಸಿದ ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ ಎನ್ನುವ ತಣ್ತೀವನ್ನು ಭಾರತ ಬಲವಾಗಿ ನಂಬಿದೆ. ಅದರಂತೆ ಹುಟ್ಟಿದ ಮನುಷ್ಯನಿಗಷ್ಟೇ ಅಲ್ಲ, ಇನ್ನೂ ತಾಯ ಗರ್ಭದಿಂದ ಹೊರಬರದ ಕಂದನ ಜೀವಿಸುವ ಹಕ್ಕನ್ನು ಭಾರತದ ಸಂವಿಧಾನ ರಕ್ಷಿಸಿದ್ದು, 40 ನಿಮಿಷಗಳ ರಹಸ್ಯ ಚರ್ಚೆಯ ಬಳಿಕ ತಾಯಿಯ ಗರ್ಭದಲ್ಲಿರೋ ಜೀವವೊಂದರ ಹಕ್ಕು ರಕ್ಷಿಸುವಲ್ಲಿ ಸುಪ್ರೀಂಕೋರ್ಟ್ ಯಶಸ್ವಿಯಾಗಿದೆ.
20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಳು ಗರ್ಭಧರಿಸಿದ್ದು, ತನ್ನ ಗರ್ಭಪಾತಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು. ಆದರೆ,ಅದಾಗಲೇ ಆಕೆ ಗರ್ಭಧರಿಸಿ 29 ವಾರಗಳಾಗಿದ್ದ ಹಿನ್ನೆಲೆ ಗರ್ಭಪಾತ ಮಾಡುವುದು ಸಾಧ್ಯವಿಲ್ಲವೆಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ಸ್ವತಃ ಯುವತಿಯ ಪೋಷಕರಿಗೂ ಆಕೆ ಗರ್ಭಧರಿಸಿ 8 ತಿಂಗಳಾಗಿದೆ ಎನ್ನುವ ವಿಚಾರದ ಅರಿವಿಲ್ಲದ ಕಾರಣ, ನ್ಯಾಯಾಲಯದಲ್ಲಿ ತಜ್ಞ ವೈದ್ಯರ ಸಲಹೆ ಕೇಳುತ್ತಿದ್ದಂತೆ ಪ್ರಕರಣ ಸೂಕ್ಷ್ಮತಿರುವು ಪಡೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ.ಪಿ.ಎಸ್.ನರಸಿಂಹ, ನ್ಯಾ.ಜೆ.ಪಿ ಪರ್ದಿವಾಲಾ ಅವರ ತ್ರಿಸದಸ್ಯ ನ್ಯಾಯಪೀಠವು ಸಂದರ್ಭವನ್ನು ಸಮಯೋಚಿತವಾಗಿ ನಿಭಾಯಿಸಿದ್ದು, ವಿಚಾರಣೆ ಮಧ್ಯದಲ್ಲೇ ಪೀಠದಿಂದ ಹೊರನಡೆದಿದು, ಸಿಜೆಐ ಕೊಠಡಿಯಲ್ಲಿ ಗುಪ್ತವಾಗಿ ಚರ್ಚೆ ನಡೆಸಿದ್ದಾರೆ. ಪ್ರಕರಣ ಸಂಬಂಧಿಸಿ ಗುಪ್ತಚರ್ಚೆಗೆ ಅವಕಾಶ ನೀಡಿ, ಸಿಜೆಐ ನೇತೃತ್ವದ ನ್ಯಾಯಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಸಮ್ಮುಖದಲ್ಲಿ 40 ನಿಮಿಷಗಳ ರಹಸ್ಯ ಚರ್ಚೆ ನಡೆಸಿ, ಮಗುವಿಗೆ ಜನ್ಮ ನೀಡುವಂತೆ ವಿದ್ಯಾರ್ಥಿ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಮಗುವಿನ ಭವಿಷ್ಯ ಸುರಕ್ಷತೆಗೆ ಕ್ರಮ
ತುಷಾರ್ ಮೆಹ್ತಾ ಅವರು ಕಾನೂನು ಬದ್ಧವಾಗಿ ಮಗುವನ್ನು ದತ್ತು ನೀಡುವ ಕ್ರಮಗಳ ಬಗ್ಗೆ ಚರ್ಚಿಸಿದ್ದು, ಈಗಾಗಲೇ ಮಗುವನ್ನು ದತ್ತು ಪಡೆದುಕೊಳ್ಳಲು ಪೋಷಕರು ಸಿದ್ಧರಿದ್ದಾರೆ, ಕಾನೂನು ಬದ್ಧವಾಗಿ ಮಾಹಿತಿಗಳು ಗೌಪ್ಯವಾಗಿಯೇ ಪ್ರಕ್ರಿಯೆ ನಡೆಯಲಿದೆ ಎಂದು ಸಿಜೆಐ ಅವರಿಗೆ ತಿಳಿಸಿದ್ದಾರೆ. ಈ ವೇಳೆ ಸ್ವತಃ ತಾವು 2 ಹೆಣ್ಣು ಮಕ್ಕಳನ್ನು ದತ್ತು ಪಡೆದಿರುವ ಸಿಜೆಐ, ಅನಾಥ ಮಕ್ಕಳ ಹೊಣೆ ಎಲ್ಲರ ಜವಾಬ್ದಾರಿ ಎನ್ನುವುದನ್ನು ಪುನರುಚ್ಛರಿಸಿದ್ದು, ಮಗು ಜನಿಸಿದ ಬಳಿಕ ದತ್ತು ಪಡೆಯುವ ಪೋಷಕರು ಈ ಕುರಿತಂತೆ ಪ್ರಸ್ತಾಪಿಸಲು ನ್ಯಾಯಪೀಠ ಅನುಮತಿಸಿದೆ.
Related Articles
ಜವಾಬ್ದಾರಿಗೆ ಸಿದ್ಧವೆಂದ ಭಾಟಿ
ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಐಶ್ವರ್ಯ ಭಾಟಿ, ಗರ್ಭಿಣಿ ವಿದ್ಯಾರ್ಥಿನಿಯೊಂದಿಗೆ ಸಂಪರ್ಕದಲ್ಲಿದ್ದು, ಆಕೆ ಮಗುವಿಗೆ ಜನ್ಮ ನೀಡುವುದರ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರ್ಥೈಸಿದ್ದಾರೆ. ಅಲ್ಲದೇ, ಇದೇ ವೇಳೆ, ಅಗತ್ಯಬಿದ್ದರೆ ತಾವೇ ಮಗುವಿನ ಜವಾಬ್ದಾರಿ ತೆಗೆದುಕೊಂಡು, ತಮ್ಮೊಟ್ಟಿಗೆ ಇಟ್ಟುಕೊಳ್ಳಲು ಸಿದ್ಧವಿರುವುದಾಗಿಯೂ ಭಾಟಿ ಹೇಳಿದ್ದಾರೆ.
ಏಮ್ಸ್‌ಗೆ ಜವಾಬ್ದಾರಿ ಸಂವಿಧಾನದ 142ನೇ ವಿಧಿಯ ವಿಶೇಷ ಅಧಿಕಾರವನ್ನು ಸಪ್ರೀಂ ನ್ಯಾಯಪೀಠ ಬಳಸಿಕೊಂಡಿದ್ದು, ಗರ್ಭವತಿ ವಿದ್ಯಾರ್ಥಿನಿಯಸುರಕ್ಷಿತ ಹೆರಿಗೆ, ಗರ್ಭಿಣಿಯ ಆರೋಗ್ಯ, ಯೋಗಕ್ಷೇಮ, ಹುಟ್ಟಲಿರುವ ಶಿಶುವಿನ ಆರೋಗ್ಯ ಸೇರಿದ ಎಲ್ಲಾ ಜವಾಬ್ದಾರಿಯನ್ನು ವೈದ್ಯಕೀಯ ಸಂಸ್ಥೆ ಏಮ್ಸ್‌ಗೆ ವಹಿಸಿದೆ.