ನವದೆಹಲಿ: ಹೈಕೋರ್ಟ್, ಸುಪ್ರೀಂಕೋರ್ಟ್ ಸೇರಿದಂತೆ ನ್ಯಾಯಾಂಗದ ಉನ್ನತ ಮಟ್ಟದಲ್ಲಿ ನೇಮಕಗಳನ್ನು ತಡೆಹಿಡಿಯುವ ಪ್ರಕ್ರಿಯೆ ಒಳ್ಳೆಯದಲ್ಲ. ಈ ಬಗ್ಗೆ ಕೊಲಿಜಿಯಂ ಶಿಫಾರಸುಗಳನ್ನು ಮಾಡಿದ್ದರೂ, ಅದರ ಅನುಷ್ಠಾನಕ್ಕೆ ವಿಳಂಬವೇಕೆ ಎಂದು ಕೇಂದ್ರ ಸರ್ಕಾರದ ನಿಲುವಿಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾ.ಎಸ್.ಕೆ.ಕೌಲ್ ಮತ್ತು ನ್ಯಾ.ಎ.ಎಸ್.ಓಕಾ ಅವರನ್ನೊಳಗೊಂಡ ನ್ಯಾಯಪೀಠ “ಶಿಫಾರಸು ಮಾಡಿರುವ ಹೆಸರುಗಳ ಬಗ್ಗೆ ಅನುಮೋದನೆ ನೀಡದೆ, ಸುಮ್ಮನೇ ಕೂರುವ ನಿಲುವಿಗೆ ಸಮ್ಮತ ಇಲ್ಲ’ ಎಂದು ಸರ್ಕಾರಕ್ಕೆ ಅತೃಪ್ತಿಯನ್ನು ತಿಳಿಯಪಡಿಸಿದೆ. ಜತೆಗೆ ಕೇಂದ್ರ ಕಾನೂನು ಸಚಿವಾಲಯದಲ್ಲಿನ ನ್ಯಾಯ ವಿಭಾಗದ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಶಿಫಾರಸು ಮಾಡಿರುವ ಹೆಸರುಗಳನ್ನು ಯಾಕಾಗಿ ತಡೆ ಹಿಡಿಯಲಾಗಿದೆ ಎಂದೂ ಪ್ರಶ್ನಿಸಿದೆ.
ಬೆಂಗಳೂರಿನ ನ್ಯಾಯವಾದಿಗಳ ಒಕ್ಕೂಟ ವಕೀಲ ಪೈ ಅಮಿತ್ ಅವರ ಮೂಲಕ ಕೇಂದ್ರದ ನಿರ್ಧಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಇದುವರೆಗೆ ಕೊಲೀಜಿಯಂ ನ್ಯಾಯಾಂಗದ ಉನ್ನತ ಹುದ್ದೆಗಳಿಗೆ 11 ಹೆಸರುಗಳನ್ನು ಶಿಫಾರಸುಗಳನ್ನು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅದಕ್ಕೆ ಸಮ್ಮತಿ ಸೂಚಿಸಿಲ್ಲ.