Advertisement
ಜನದನಿ ಬಳಗ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಚಂದ್ರಶೇಖರ ಪಾಟೀಲ ಅವರೊಂದಿಗೆ “ವಾದ-ಸಂವಾದ’ ಕಾರ್ಯಕ್ರಮದಲ್ಲಿ ಸಾಹಿತಿ ಭೈರಮಂಗಲ ರಾಮೇಗೌಡ ಅವರು “ಸಾಹಿತ್ಯ ಪರಿಷತ್ತಿಗೆ 102 ವರ್ಷ ಪೂರ್ಣಗೊಳ್ಳುತ್ತಿದ್ದು, ಮಹಿಳೆಯೊಬ್ಬರು ಅಧ್ಯಕ್ಷರಾಗಬಾರದೇಕೆ’ ಎಂಬ ಪ್ರಶ್ನೆ ಎತ್ತಿದರು.
Related Articles
Advertisement
ಅವರು ಕೇವಲ ಅಲಂಕಾರಿಕ ಅಧ್ಯಕ್ಷರಾಗದೇ ವರ್ಷವಿಡೀ ಕನ್ನಡಕ್ಕಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು. ಸಾಹಿತಿ ಡಾ. ಎಲ್.ಜಿ.ಮೀರಾ, “ಕನ್ನಡೇತರರಿಗೆ ಕನ್ನಡ ಕಲಿಸುವ ವ್ಯವಸ್ಥೆ ಸದೃಢವಾಗಿಲ್ಲ. ಈ ಕೆಲಸ ತುಂಬಾ ಜರೂರಾಗಿ ಆಗಬೇಕು. ಕನ್ನಡೇತರರು ಕನ್ನಡ ಕಲಿಯುವಂತಹ ವಾತಾವರಣ ಸೃಷ್ಟಿಸಬೇಕು,” ಎಂದು ಮನವಿ ಮಾಡಿಕೊಂಡರು.
ದೂರದರ್ಶನ ಕೇಂದ್ರದ ನಿವೃತ್ತ ಅಧಿಕಾರಿ ಡಾ.ಮಹೇಶ್‌ಜೋಷಿ ಮಾತನಾಡಿ, “ವಿದ್ಯುನ್ಮಾನ ಮಾಧ್ಯಮಗಳಲ್ಲಿನ ನಿರೂಪಕರ ಭಾಷಾ ಉಚ್ಛಾರಣೆ ಕೇಳಿದ್ರೆ ಆತಂಕವಾಗುತ್ತದೆ. ಗಡಿನಾಡ ಭಾಗದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬೇಕು’ ಎಂದು ಡಾ. ಮಹೇಶ್ ಜೋಷಿ ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಚಂಪಾ, “”ಭಾಷಾ ಶುದ್ಧತೆ, ಉಚ್ಛಾರಣೆ ಬಗ್ಗೆ ಹಲವು ತಕರಾರುಗಳಿವೆ. ರಾಜ್ಯದ ನಾನಾ ಭಾಗಗಳಲ್ಲಿ ಬೇರೆ ಬೇರೆ ರೀತಿ ಕನ್ನಡವನ್ನು ಉಚ್ಛಾರಣೆ ಮಾಡಲಾಗುತ್ತದೆ. ಭಾಷೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುತ್ತವೆ. ಯಾವುದೇ ಜೀವಂತ ಭಾಷೆಗೆ ಏಕರೂಪದ ಆಕಾರಗಳಿರಲಿಲ್ಲ.
ನಾನಾ ಆಕಾರಗಳು ಭಾಷೆಯ ಜೀವಂತ ಲಕ್ಷಣವಿದ್ದಂತೆ. ಶುದ್ಧ ಕನ್ನಡ ಮಾತನಾಡಲೇಬೇಕು ಎಂದು ಆದೇಶ ಹೊರಡಿಸಲು ಆಗುವುದಿಲ್ಲ” ಎಂದು ತಿಳಿಸಿದರು. ಸಾಹಿತಿ ಡಾ. ಬೆಳಕೆರೆ ಲಿಂಗರಾಜಯ್ಯ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಜನದನಿ ಬಳಗದ ಅಧ್ಯಕ್ಷ ನೇ.ಭ.ರಾಮಲಿಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಮಾಣಿಕವಾಗಿ ಕೆಲಸ ಮಾಡುವೆ: ಚಂಪಾ, “ಸಾಹಿತ್ಯ ಸಮ್ಮೇಳನ ರಾಜಕೀಯ ಸಂಘಟನೆ ಅಥವಾ ಪಕ್ಷವಲ್ಲ’ ಕನ್ನಡ ಬದುಕಿನ ಆಯಾಮಗಳನ್ನು ಚರ್ಚಿಸುವ, ನೋವು, ಒತ್ತಾಸೆಯ ಹಕ್ಕೊತ್ತಾಯ ಮಂಡಿಸುವ ವೇದಿಕೆ. ಮುಂದಿನ ಸಮ್ಮೇಳನದ ವೇಳೆಗೆ ಅನುಷ್ಠಾನಕ್ಕೆ ತರಬಹುದಾದಂತಹ ನಿರ್ಣಯಗಳನ್ನಷ್ಟೇ ತೆಗೆದುಕೊಳ್ಳಲಾಗುವುದು.
ಸಮ್ಮೇಳನಾಧ್ಯಕ್ಷರ ಹೊಣೆ ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕನ್ನಡ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರ್ಯಸೂಚಿಗಳನ್ನು ಸಿದ್ಧಪಡಿಸಿ, ಪರಿಹರಿಸಲು ಶ್ರಮಿಸಲಾಗುವುದು ಎಂದು ಆಶ್ವಾಸನೆ ನೀಡಿದರು.