ದೇವನಹಳ್ಳಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನಾಡಿನ ನೆಲ ಜಲ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮನವಿ ಮಾಡಿದರು. ತಾಲೂಕಿನ ಉಗನವಾಡಿ ಗೇಟಿನಲ್ಲಿರುವ ಅವರ ನಿವಾಸದಲ್ಲಿ ಜಿಲ್ಲಾ ನೂತನ ಜೆಡಿಎಸ್ ಉಪಾಧ್ಯಕ್ಷ ಹಸನ್ ಸಾಬ್ ಅವರಿಗೆ ನೇಮಕದ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಒತ್ತನ್ನು ಜನ ನೀಡಬೇಕು. ರಾಷ್ಟ್ರೀಯ ಪಕ್ಷಗಳು ಭಾಷೆ, ಜಲ,ನೆಲ ಉಳಿವಿಗೆ ಆಸಕ್ತಿ ಕೊಡುವುದಿಲ್ಲ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಆದ್ಯತೆ ನೀಡಿ ಆ ರಾಜ್ಯಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿರುತ್ತಾರೆ. ಹೊಸಕೋಟೆ ತಾಲೂಕಿಗೆ ವಿಧಾನಸಭಾ ಚುನಾವಣೆಗೆ ಅನಿತಾ ಅವರು ಸ್ಪರ್ಧಿಸಿದರೆ ಜಿಲ್ಲಾಧ್ಯಕ್ಷನಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಸಿ-ಫೋರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರದ ಮೆಚ್ಚುಗೆ ಬಗ್ಗೆ ಬಂದಿದ್ದು, ಇದು ಜನರ ಅಭಿಪ್ರಾಯವಲ್ಲ. ಸರ್ಕಾರದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿಲ್ಲ. ಜನರ ಮಧ್ಯೆ ಹೋಗಿ ಸಮೀಕ್ಷೆ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ಜನರ ಅನಿಸಿಕೆಗಳಿಗೆ ತಕ್ಕಂತೆ ಸಿಫೋರ್ ಸಮೀಕ್ಷೆ ನಡೆಸಬೇಕು ಎಂದರು. ನೂತನ ಉಪಾಧ್ಯಕ್ಷ ಹಸನ್ ಸಾಬ್ ಮಾತನಾಡಿ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡುತ್ತೇನೆ. ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಶಾಸಕ ಪಿಳ್ಳಮುನಿಶಾಮಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. ಮಾಜಿ ತಾಪಂ ಅಧ್ಯಕ್ಷ ಎಚ್. ಎಸ್.ನಾರಾಯಣಾಚಾರ್, ತಾಲೂಕು ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಸಾಧಕ್ ಆಲಿ, ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಮುನಿರಾಮಯ್ಯ, ತಾಲೂಕು ಸೊಸೈಟಿ ನಿರ್ದೇಶಕ ಸಿ.ಎಂ.ನಾರಾಯಣಸ್ವಾಮಿ, ಮುಖಂಡ ರಾಜಕುಮಾರ್, ರವಿಕುಮಾರ್, ಅಭಿಷೇಕ್, ಮತ್ತಿತರರು ಇದ್ದರು.