Advertisement

ಸಹಕಾರಿ ಕ್ಷೇತ್ರಕ್ಕೆ ಅವಕಾಶಕ್ಕಾಗಿ ಬೆಂಬಲಿಸಿ

12:55 AM Nov 17, 2021 | Team Udayavani |

ಮಂಗಳೂರು: “ವಿಧಾನ ಪರಿಷತ್‌ನಲ್ಲಿ ಸಹಕಾರಿ ಕ್ಷೇತ್ರಕ್ಕೆ ಒಂದು ಅವಕಾಶವನ್ನು ನೀಡುವ ನಿಟ್ಟಿನಲ್ಲಿ ನನ್ನನ್ನು ಬೆಂಬಲಿಸಿ ಎಂದು ಮತದಾರರಲ್ಲಿ, ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಹಕಾರಿ ನೇತಾರ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಚುನಾವಣ ಪ್ರಚಾರ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದ ಮೂಲಕ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿ ಕೊಡುವ ಕಾರ್ಯ ಆಗಿದೆ. ಮುಂದಿನ ವಿಧಾನ ಪರಿಷತ್‌ ಚುನಾವಣೆಯಲ್ಲೂ ಇದೇ ರೀತಿ ನನ್ನನ್ನು ಬೆಂಬಲಿಸಿ ಎಂದವರು ಹೇಳಿದರು.

ಕಚೇರಿಯ ಉದ್ಘಾಟನೆ ಸಮಾರಂಭದಲ್ಲಿ ಪುರೋಹಿತ ರಮೇಶ್‌ ಭಟ್‌, ಫಾ| ರವಿ ಸಂತೋಷ್‌ ಕಾಮತ್‌, ಧರ್ಮಗುರು ಮೊಹಮ್ಮದ್‌ ಕಾಮಿಲ್‌ ಸಖಾಫಿ ಭಾಗವಹಿಸಿ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿ ಅಶಕ್ತರು, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಡಾ| ಎಂ.ಎನ್‌. ಆರ್‌. ಅವರು ಒಕ್ಕೂಟದ ಸಮಾಜ ಸೇವಾ ಕಾರ್ಯಗಳಿಗೆ ಸದಾ ನೆರವು ನೀಡುತ್ತ ಬಂದಿದ್ದಾರೆ ಎಂದರು.

ಕಂಬಳ ಆಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ ಅವರು ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಡಾ| ಎಂ.ಎನ್‌. ಆರ್‌. ಅವರನ್ನು ಬೆಂಬಲಿಸಿ ಎಂದರು. ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರು ಮಾತನಾಡಿ, ಚುನಾವಣೆಯಲ್ಲಿ ಗೆಲ್ಲುವ ಮೂಲಕ ಡಾ| ಎಂ. ಎನ್‌. ಆರ್‌. ಅವರು ಪಂಚಾಯತ್‌ರಾಜ್‌ ವ್ಯವಸ್ಥೆ ಹಾಗೂ ನಗರಾಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.

ಇದನ್ನೂ ಓದಿ:ನೌಕಾಪಡೆಗೆ ಕ್ಷಿಪಣಿ ನಿಗ್ರಹ, ಜಲಾಂತರ್ಗಾಮಿ ಶಕ್ತಿ

Advertisement

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನ ಸಂಚಾಲಕ ಸುಂದರ ಮಾಸ್ತರ್‌ ಅವರು ಮಾತನಾಡಿ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾಗುವುದು, ಸಹಕಾರಿ, ಗ್ರಾಮೀಣಾಭಿವೃದ್ಧಿಗೆ ಮಾತ್ರವಲ್ಲದೆ ಈ ವರ್ಗಕ್ಕೂ ಅವಶ್ಯವಾಗಿದೆ ಎಂದರು.
ಉಡುಪಿ ಜಿಲ್ಲಾ ಚುನಾವಣ ಉಸ್ತುವಾರಿ ಜಯಕರ ಶೆಟ್ಟಿ ಇಂದ್ರಾಳಿ, ಈಶ್ವರ ಭಟ್‌ ಪುತ್ತೂರು, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ಬಿಲ್ಲವ ಮುಖಂಡ ವೈ. ಸುಧೀರ್‌ ಕುಮಾರ್‌ ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ಜಿ. ಪಂ. ಮಾಜಿ ಸದಸ್ಯರಾದ ಪದ್ಮಶೇಖರ ಜೈನ್‌, ಬಿ. ನಿರಂಜನ್‌, ಉದ್ಯಮಿಗಳಾದ ರೋಹನ್‌ ಮೊಂತೋರೊ, ಲಕ್ಷ್ಮೀಶ ಭಂಡಾರಿ, ಇನ್‌ಲ್ಯಾಂಡ್ ಓರ್ನೆಟ್‌ನ ಮಾಲಕ, ಉದ್ಯಮಿ ಸಿರಾಜ್‌ ಅಹಮ್ಮದ್‌, ಕೆ.ಪಿ.ಥೋಮಸ್‌ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲರ ಗೆಲುವು
ಎಲ್ಲರ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಪಂಚಾಯತ್‌ರಾಜ್‌ ವ್ಯವಸ್ಥೆ, ನಗರಾಡಳಿತ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದ ಡಾ| ರಾಜೇಂದ್ರ ಕುಮಾರ್‌ ಅವರು ನ. 22 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಚುನಾವಣ ಉಸ್ತುವಾರಿ ಬೆಳಪು ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ದ.ಕ. ಜಿಲ್ಲಾ ಚುನಾವಣ ಉಸ್ತುವಾರಿ ಶಶಿಕುಮಾರ್‌ ರೈ ಬಾಲೊÂಟ್ಟು ವಂದಿಸಿದರು. ಆರ್‌ಜೆ ಪ್ರಸನ್ನ ಅವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next