Advertisement

ರಾಜ್ಯ ಅಭಿವೃದ್ಧಿಗೆ ಜೆಡಿಎಸ್‌ ಬೆಂಬಲಿಸಿ: ಕುಮಾರಸ್ವಾಮಿ

03:23 PM May 05, 2018 | Team Udayavani |

ದೇವದುರ್ಗ: ಬಡವರು, ಹಿಂದುಳಿದವರು, ಶೋಷಿತರು, ದಲಿತರ ಅಭಿವೃದ್ಧಿ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಜೆಡಿಎಸ್‌ ಅಭ್ಯರ್ಥಿಗಳಿಗೆ ಗೆಲ್ಲಿಸುವ ಮೂಲಕ ಜೆಡಿಎಸ್‌ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿನಂತಿಸಿದರು.

Advertisement

ಪಟ್ಟಣದ ಬಸವ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದ ಅಭಿವೃದ್ಧಿಗಾಗಿ ವಿನೂತನ ದೃಷ್ಟಿಕೋನದೊಂದಿಗೆ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ನಿಮ್ಮಿಂದ ಪಡೆದ ತೆರಿಗೆ ಹಣದಲ್ಲೇ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡುವೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್‌ ಸರಕಾರಗಳು ರೈತ ವಿರೋಧಿಗಳಾಗಿವೆ. 12 ವರ್ಷಗಳ ಹಿಂದೆ ನಮ್ಮ ಸರಕಾರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ, ಜಾರಿಗೆ ತಂದ ಯೋಜನೆಗಳನ್ನು ನೀವೆಲ್ಲಾ ನೋಡಿದ್ದಿರಿ. ರೈತರ ಬಾಳು ಹಸನಾಗಲು, ಎಲ್ಲರಿಗೂ ಉದ್ಯೋಗ, ಸಮಬಾಳು, ಸಂಪೂರ್ಣ ನೀರಾವರಿ ಸೇರಿ ರಾಜ್ಯ ಮತ್ತು ಜನರ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನನ್ನನ್ನು ಪರೀಕ್ಷಿಸಲಾದರೂ ಒಮ್ಮೆ ಜೆಡಿಎಸ್‌ಗೆ ಬಹುಮತದ ಅಧಿಕಾರ ನೀಡಿ ಎಂದು ವಿನಂತಿಸಿದರು. 

ಸತತ ಬರ, ನಿರಂತರ ಬೆಳೆ ಹಾನಿಯಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. 58 ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿಯಾಗಿ ರೈತರು ಸಾಲಕ್ಕೆ ಗುರಿಯಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಎಂದರೆ ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ.

ಆದರೆ ಯಾರಿಗೂ ಗೊತ್ತಾದ ಹಾಗೆ ಕೈಗಾರಿಕೋದ್ಯಮಿಗಳ 2.41 ಲಕ್ಷ ಕೋಟಿ ಸಾಲ ಮಾನ್ನ ಮಾಡಿದ್ದಾರೆ. ಇನ್ನು ರಾಜ್ಯ
ಸರಕಾರ ಅತ್ತು-ಕರೆದ ನಂತರ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದಾಗಿ ಘೋಷಿಸಿದೆ. ಆದರೆ ಒಂದು ವರ್ಷ ಕಳೆದರೂ ಸಾಲದ ಮೊತ್ತವನ್ನು ಸರಕಾರ ಮರುಪಾವತಿಸಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಹರಿಹಾಯ್ದರು. ಜೆಡಿಎಸ್‌ ಸರಕಾರದ ಅವಧಿಯಲ್ಲಿ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ, 20 ದಿನಗಳ ಒಳಗೆ ರೈತರ ಮನೆಗೆ ರಸೀದಿ ಕಳುಹಿಸಿರುವುದನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಜೆಡಿಎಸ್‌ ಅ ಧಿಕಾರಕ್ಕೆ ಬಂದರೆ 24 ಗಂಟೆಗಳ
ಒಳಗೆ ರಾಷ್ಟ್ರೀಯ ಬ್ಯಾಂಕ್‌ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳ ರೈತರ ಸಾಲ ಮತ್ತು ಸ್ತ್ರೀಶಕ್ತಿ ಗುಂಪಿನ ಸಾಲ ಮನ್ನಾ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

Advertisement

ಇನ್ನೂ ಒಂದು ವಾರ ಕಾಲಾವಕಾಶವಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಬೇಕು. ಈ ಕ್ಷೇತ್ರದಲ್ಲಿ ಅಭ್ಯರ್ಥಿ ವೆಂಕಟೇಶ ಪೂಜಾರಿಯನ್ನು ಬಹುಮತದಿಂದ ಆಯ್ಕೆಗೊಳಿಸಿ ಜೆಡಿಎಸ್‌ ಸರಕಾರ ಅಸ್ತಿತ್ವಕ್ಕೆ ತರುವ ಹೊಣೆ ಕಾರ್ಯಕರ್ತರ ಮೇಲಿದೆ ಎಂದರು. 

ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ವಿಧಾನ ಪರಿಷತ್‌ ಸದಸ್ಯರಾದ ಶರವಣ, ಕಾಂತರಾಜ್‌, ಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರೆಡ್ಡಿ, ಮುಖಂಡರಾದ ಶಿವರಾಜ ಪಾಟೀಲ ಗೊರೇಬಾಳ, ಉತ್ತಮ್ಮ ಬಸವರಾಜ, ಯುಸೂಫ್‌ ಖಾನ್‌, ಚಂದ್ರಶೇಖರ ಪಾಟೀಲ, ಜಾಗೀರ ಜಾಡಲದಿನ್ನಿ, ಬಾಪುಗೌಡ ಪಾಟೀಲ್‌ ಚಿಕ್ಕಹೊನ್ನಕುಣಿ, ಅಮೀನರೆಡ್ಡಿ ಪಾಟೀಲ, ವಿರೂಪಾಕ್ಷಿ ಬಳೆ, ಭೀಮರಾಯ ಹದ್ದಿನಾಳ, ಬಿಎಸ್‌ಪಿಯ ವೆಂಕನಗೌಡ ಇತರರು ಉಪಸ್ಥಿತರಿದ್ದರು. 

 ದೇವದುರ್ಗ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೆಂಕಟೇಶ ಪೂಜಾರಿ ಮಾತನಾಡಿ, ಬಿಜೆಪಿ ಅಭ್ಯರ್ಥಿ, ಶಾಸಕ ಕೆ.ಶಿವನಗೌಡ ನಾಯಕ ಬಹು ದೊಡ್ಡ ಸುಳ್ಳುಗಾರ. ಅಧಿಕಾರ, ಹಣ ಮದದಿಂದ ಮತಗಳನ್ನು ಖರೀದಿಸುತ್ತೇನೆ ಎಂದು ಬೀಗುತ್ತಿದ್ದಾನೆ. ಈತನ ಸುಳ್ಳಿನ ಕಂತೆಗೆ ಬೇಸತ್ತು ಮುಷ್ಟೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತದಾರರು ವಾಪಾಸು ಕಳಿಸಿದ್ದಾರೆ. ರಾತ್ರೋ ರಾತ್ರಿ ಯಾರಿಗೂ ಗೊತ್ತಾಗದಂತೆ ಪ್ರಚಾರ ಮಾಡಲು ಹೋಗಿ ಮತ ಖರೀದಿಗೆ ಹಣ ಹಂಚುತ್ತಿದ್ದಾನೆ. ನೀರು ಕೊಡಪ್ಪಾ ಎಂದರೆ ಪ್ರತಿ ಗ್ರಾಮಕ್ಕೆ ಬೀಯರ್‌, ಬ್ರ್ಯಾಂಡಿ ವಿತರಿಸುತ್ತಾನೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಈಗಾಗಲೇ ಎರಡು ಬಾರಿ ನಮ್ಮನ್ನು ಸೋಲಿಸಿರುವಿರಿ. ಮೂರನೇ ಬಾರಿಗೆ ಶಿಕ್ಷೆ ಕೊಡಬೇಡಿ. ಒಂದು ಒಳ್ಳೆಯ ನಿರ್ಧಾರ ಮಾಡಬೇಕಾಗಿದೆ. ನೀರಾವರಿ ವಿಷಯ ಬಂದಾಗ ಎಚ್‌.ಡಿ.ದೇವೇಗೌಡ ಮತ್ತು ನನ್ನನ್ನು ನೆನಪಿಸುತ್ತೀರಿ. ಮೂರ್ತಿ ಮಾಡುವ ವಿಚಾರ ಮಾಡುತ್ತಿರಿ. ಆದರೆ ಮತ ಹಾಕುವಾಗ ಮಾತ್ರ ಜೆಡಿಎಸ್‌ ಪಕ್ಷವನ್ನು ಏಕೆ? ಮರೆಯುತ್ತಿರಿ ಎಂಬುದೇ ತಿಳಿಯದಾಗಿದೆ.  
ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ 

Advertisement

Udayavani is now on Telegram. Click here to join our channel and stay updated with the latest news.

Next