ಸೇಡಂ: ಯಾರು ಹಿಂದೂಗಳ ಧ್ವನಿಯಾಗಿ ನಿಲ್ಲುತ್ತಾರೆ ಅವರ ಪರವಾಗಿ ಸಮಸ್ತ ಹಿಂದೂ ಸಮಾಜ ನಿಲ್ಲಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಆಂದೋಲಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ರಥ ಬೀದಿಯಲ್ಲಿ ಗಣಪತಿ ವಿಸರ್ಜನೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸದಾ ಹಿಂದೂಗಳಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಬ್ರಿಟಿಷರ ಆಳ್ವಿಕೆಯ ರೀತಿಯಲ್ಲಿ ಹಿಂದೂಗಳಿಗೆ ತೊಂದರೆ ನೀಡಿದ್ದಾರೆ. ನಾವು ಹಿಂದೂಗಳು ಯಾರ ಸ್ಥಳವನ್ನು ಆಕ್ರಮಣ ಮಾಡಿಲ್ಲ, ನಮ್ಮ ಸ್ಥಳಗಳನ್ನು ಆಕ್ರಮಿಸಿ ಮಜೀದಿ ಕಟ್ಟಲಾಗಿದೆ. ಶಿವಮೊಗ್ಗದಲ್ಲಿ ಅಂಟಿಸಿದ ವೀರ ಸಾವರಕರ್ ಭಾವಚಿತ್ರ ಹರಿದು, ರಾಷ್ಟ್ರ ಧ್ವಜವನ್ನು ಕಿತ್ತು ಬಿಸಾಕಿ ಅಪಮಾನ ಮಾಡಲಾಗಿದೆ ಎಂದು ದೂರಿದರು.
ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ದೇಶದಲ್ಲಿ ಧಾರ್ಮಿಕ ಆಚರಣೆಗಳು ಮಾಡುವುದಕ್ಕೆ ಅಡ್ಡಿ ಆತಂಕ ಸೃಷ್ಟಿ ಮಾಡಲಾಗುತ್ತಿದೆ. ಆಡಕಿಯ ಕಸ್ತೂರಿ ರಂಗನಾಥನ ದೇವಾಲಯ ಹಿಂದೂಗಳದ್ದು ಎಂದು ನ್ಯಾಯಾಲಯದಲ್ಲಿ ತೀರ್ಪು ಬಂದರೂ ಮಾಜಿ ಶಾಸಕರ ಕುಮ್ಮಕ್ಕಿನಿಂದ ಪೂಜೆ ಮಾಡಲು ಬಿಡಲಿಲ್ಲ. ಆದರೆ ಅದೇ ದೇವಾಲಯದ ಜೀಣೋದ್ಧಾರಕ್ಕಾಗಿ 1.20 ಕೋಟಿ ಅನುದಾನ ನೀಡಿದ್ದು ಶಾಸಕ ರಾಜಕುಮಾರ ಪಾಟೀಲ ಎಂದು ಹೇಳಿದರು.
ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಸೇಡಂನ ಹಿಂದೂ ಬಾಂಧವರು ಯಾವತ್ತೂ ಯಾರಿಗೂ ತೊಂದರೆ ಕೊಟ್ಟವರಲ್ಲ. ನಮ್ಮ ಆಚರಣೆಗಳನ್ನು ತುಂಬಾ ಶಾಂತಿಯಿಂದ ಮಾಡಿಕೊಂಡು ಹೋಗುತ್ತೇವೆ. ಮುಂದಿನ ವರ್ಷದ ಗಜಾನನ ಉತ್ಸವ ವಿಭಿನ್ನವಾಗಿ ಆಚರಣೆ ಮಾಡಲಾಗುವುದು ಎಂದರು.
ವಿಎಚ್‌ಪಿಯ ಮುಖಂಡ ಶಿವುಕುಮಾರ ಬೋಳಶೆಟ್ಟಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಮಠ, ಮಂದಿರಗಳಿಗೆ ಅತೀ ಹೆಚ್ಚು ಅನುದಾನ ನೀಡಿದ ಏಕೈಕ ಶಾಸಕ ರಾಜಕುಮಾರ ಪಾಟೀಲ. ಅವರ ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಬೆಂಬಲವಾಗಿರಬೇಕು ಎಂದರು.
ಸಾಲು ಮಂಟಪಕ್ಕಾಗಿ 50 ವರ್ಷಗಳ ಕಾಲ ಹೋರಾಟ ಮಾಡಿದ ಧನಶೆಟ್ಟಿ ಸಕ್ರಿ, ಶೇಷಯ್ಯ ಐನಾಪೂರ ಅವರನ್ನು ಸತ್ಕರಿಸಲಾಯಿತು. ಶಿವುಕುಮಾರ ಪಾಟೀಲ (ಜಿಕೆ) ತೆಲ್ಕೂರ ವೇದಿಕೆಯಲ್ಲಿದ್ದರು. ಮಹಾದೇವ ಪಂಚಾಳ ಪ್ರಾರ್ಥಿಸಿದರು. ಕಾಶಿನಾಥ ನಿಡಗುಂದಾ ಸ್ವಾಗತಿಸಿದರು. ರಾಜಶೇಖರ ನೀಲಂಗಿ ಮಾತನಾಡಿದರು. ವೀರೇಶ ಹೂಗಾರ ನಿರೂಪಿಸಿದರು.