Advertisement
ಒಂದು ಪತ್ತೆದಾರಿ ಕಾದಂಬರಿ ಓದುವಾಗ, ಯಾವ ಫೀಲ್ ಬರುತ್ತೋ, ಅಂಥದ್ದೇ ಫೀಲ್ ಇಲ್ಲಿದೆಯಾದರೂ, ಅದಕ್ಕೆ ಇನ್ನಷ್ಟು “ವ್ಯಾಕರಣ’ ಬೇಕಿತ್ತು. ಎಲ್ಲೋ ಒಂದು ಕಡೆ ಚಿತ್ರ ತುಂಬಾ ಗಂಭೀರತೆಗೆ ದೂಡುತ್ತಿದ್ದಂತೆಯೇ, ಇನ್ನೆಲ್ಲೋ ಕಡೆ ಹಾಡೊಂದು ಬಂದು ಗಂಭೀರತೆಗೆ ಕಲ್ಲು ಹಾಕಿ ಬಿಡುತ್ತೆ. ಅದು ಬಿಟ್ಟರೆ, ಸಣ್ಣ ಪುಟ್ಟ ಕಿರಿಕಿರಿ ನಡುವೆ ನೋಡಿಸಿಕೊಂಡು ಹೋಗುವ ಸಣ್ಣದೊಂದು “ತಾಕತ್ತು’ ಚಿತ್ರಕ್ಕಿದೆ. ಇಲ್ಲಿ ಫ್ರೆಶ್ ಕಥೆ ಇದೆ ಅಂದುಕೊಳ್ಳುವಂತಿಲ್ಲ. ಆದರೆ, ಫ್ರೆಶ್ ಎನಿಸುವ ಪಾತ್ರಗಳಿವೆ.
Related Articles
Advertisement
ಅವಿನಾಶ್ ಮತ್ತು ಅನಗ ಬಾಲ್ಯದ ಗೆಳೆಯರು. ಒಂದು ಹಂತದಲ್ಲಿ ಅನಗ ಬೇರೆ ಊರಿಗೆ ಶಿಫ್ಟ್ ಆಗುತ್ತಾಳೆ. ಆಕೆ ಶಿಫ್ಟ್ ಆದ ಊರಿಗೇ ಹನ್ನೆರೆಡು ವರ್ಷಗಳ ಬಳಿಕ ಅವಿನಾಶ್ ಕುಟುಂಬವೂ ಹೋಗುತ್ತೆ. ಆಕಸ್ಮಿಕವಾಗಿ ಅವರಿಬ್ಬರ ಭೇಟಿಯಾಗುತ್ತೆ, ಪ್ರೀತಿಯೂ ಚಿಗುರುತ್ತೆ. ಇನ್ನೇನು ಇಬ್ಬರೂ ಡ್ಯುಯೆಟ್ ಹಾಡಬೇಕೆನ್ನುವಷ್ಟರಲ್ಲಿ ಒಂದು ಕೊಲೆ ನಡೆಯುತ್ತೆ. ಅದಕ್ಕೊಂದು ತನಿಖೆ ಶುರುವಾಗುತ್ತೆ. ಆ ಕೊಲೆ ಯಾಕಾಯ್ತು ಅನ್ನೋದೇ ಚಿತ್ರದ ಸಾರಾಂಶ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, “ವೆನಿಲ್ಲಾ’ ರುಚಿ ಮಾಡಬಹುದು!
ಮೊದಲ ಚಿತ್ರವಾದರೂ ಅವಿನಾಶ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದ ಮತ್ತೂಂದು ವಿಶೇಷತೆ ಅಂದರೆ, ರವಿಶಂಕರ್‌ಗೌಡ ಪಾತ್ರ. ಇದುವರೆಗೆ ಹಾಸ್ಯ ಪಾತ್ರಗಳಲ್ಲೇ ಕಾಣಿಸುತ್ತಿದ್ದ ಅವರಿಲ್ಲಿ, ಇಮೇಜ್ ಬದಲಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ ತನಿಖೆ ನಡೆಸುವ ಶೈಲಿಯಲ್ಲಿ ಗಮನಸೆಳೆಯುತ್ತಾರೆ. ಸ್ವಾತಿಕೊಂಡೆ “ಕ್ಯಾಪ್ನ ಫೋಬಿಯಾ’ ರೋಗಿ ಹೇಗೆಲ್ಲಾ ಭಯಪಡುತ್ತಾಳೆ, ಎಷ್ಟೆಲ್ಲಾ ದ್ವೇಷಿಸುತ್ತಾಳೆ ಎಂಬುದನ್ನಿಲ್ಲಿ ತೋರಿಸುವ ಮೂಲಕ ಇಷ್ಟವಾಗುತ್ತಾರೆ.
ಪಾವನಾ, ರೆಹಮಾನ್, ಬಿ.ಸುರೇಶ ಪಾತ್ರಗಳಲ್ಲಿ ಸೂಕ್ಷ್ಮತೆ ಇದೆ. ಇಡೀ ಕಥೆಯ ಆಧಾರ ಈ ಮೂರು ಪಾತ್ರಗಳು. ಮೂವರು ಸಲೀಸಾಗಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅನುಮಾನಸ್ಪದವಾಗಿ ಕಾಣುವ ಪಾತ್ರಗಳಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಬಿ.ಜೆ.ಭರತ್ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಇಂತಹ ಚಿತ್ರಕ್ಕೆ ಹಿನ್ನೆಲೆ ಸಂಗೀತ ಜೀವಾಳ. ಅದಿಲ್ಲಿ ಸಾಂಗವಾಗಿ ನೆರವೇರಿದೆ. ಕಿರಣ್ ಹಂಪಾಪುರ ಛಾಯಾಗ್ರಹಣದಲ್ಲಿ “ವೆನಿಲ್ಲಾ’ ಫಸಲು ಸೊಗಸಾಗಿದೆ.
ಚಿತ್ರ: ವೆನಿಲ್ಲಾನಿರ್ಮಾಣ: ಎಸ್.ಜಯರಾಮು
ನಿರ್ದೇಶನ: ಜಯತೀರ್ಥ
ತಾರಾಗಣ: ಅವಿನಾಶ್, ಸ್ವಾತಿಕೊಂಡೆ, ಪಾವನಾ, ರೆಹಮಾನ್, ರವಿಶಂಕರ್‌ಗೌಡ, ಬಿ.ಸುರೇಶ, ಗಿರಿ, ನಂದ ಇತರರು. * ವಿಜಯ್ ಭರಮಸಾಗರ