Advertisement

‘ರನ್‌ ಫಾರ್‌ ವಿನ್‌’ಮ್ಯಾರಥಾನ್‌ಗೆ ಬೆಂಬಲ

03:00 PM Nov 28, 2022 | Team Udayavani |

ಗದಗ: ʼಗದಗ ಹಬ್ಬ’ ಚಟುವಟಿಕೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಗದಗ ಸ್ಪೋರ್ಟ್ಸ್‌  ಆ್ಯಂಡ್‌ ಕಲ್ಚರಲ್‌ ಅಕಾಡೆಮಿಯಿಂದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ರವಿವಾರ ಅವಳಿ ನಗರ ಗದಗ-ಬೆಟಗೇರಿಯಲ್ಲಿ ನಡೆದ 27 ಕಿ.ಮೀ ಉದ್ದದ “ರನ್‌ ಫಾರ್‌ ವಿನ್‌’ (ಗೆಲುವಿನ ಓಟ) ಮ್ಯಾರಥಾನ್‌ಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

Advertisement

ನಗರದ ಕಳಸಾಪುರ ರಸ್ತೆಯ ರಾಮನಗರದ ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಐಪಿಎಲ್‌ ನ ಡೆಲ್ಲಿ ಡೇರ್‌ ಡೆವಿಲ್‌ ತಂಡದ ಕ್ರಿಕೆಟ್‌ ಆಟಗಾರ ಎಚ್‌.ಎಸ್‌. ಶರತ್‌ ಹಾಗೂ ಕಿರುತೆರೆ ನಟ ದೀಪಕಗೌಡ ಅವರು ಚಾಲನೆ ನೀಡಿದ ಮ್ಯಾರಥಾನ್‌ ಅವಳಿ ನಗರದ ಪ್ರತಿ ವಾರ್ಡ್‌ಗೆ ಸಂಚರಿಸಿತು.

ಅವಳಿ ನಗರದ ಪ್ರಮುಖ ರಸ್ತೆ ಸೇರಿ ವಾರ್ಡ್‌ಗಳ ಪ್ರತಿ ಗಲ್ಲಿಯಲ್ಲಿಯೂ ಮ್ಯಾರಥಾನ್‌ ಬಾವುಟಗಳು ರಾರಾಜಿಸುತ್ತಿದ್ದವು. ಕೆಲವು ವಾರ್ಡ್‌ಗಳ ಮ್ಯಾರಥಾನ್‌ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ ಸಿಂಗರಿಸಿ ಸ್ವಾಗತಿಸಿದರೆ, ಮತ್ತೆ ಕೆಲವೆಡೆ ಹೂವಿನ ಮಳೆಗರೆದು ತಮ್ಮ ಅಭಿಮಾನ ಹಾಗೂ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷತೆ ಎನಿಸಿತು.

ಗದಗ ಹಬ್ಬ ಹಾಗೂ ಅನಿಲ ಮೆಣಸಿನಕಾಯಿ ಪರ ಘೋಷಣೆಗಳು ಮೊಳಗಿದವು. ಕಾರ್ಯಕರ್ತರು, ಅಭಿಮಾನಿಗಳ ಬೈಕ್‌ ಹ್ಯಾಂಡಲ್‌ಗೆ ಹಾಗೂ ಕಾರುಗಳ ಮುಂಭಾಗದಲ್ಲಿ ಮ್ಯಾರಥಾನ್‌ ಹಾಗೂ ಜಿಸಿಎಲ್‌ ಗದಗ ಹಬ್ಬದ ಬ್ಯಾನರ್‌ ರಾರಾಜಿಸಿದವು. ಗದಗ-ಬೆಟಗೇರಿಯಲ್ಲಿ ರವಿವಾರ ಇಡೀ ದಿನ ಮ್ಯಾರಥಾನ್‌ ಓಟ ಜೋರಾಗಿತ್ತು.

ಕಾರ್ಯಕರ್ತರು, ಅಭಿಮಾನಿಗಳ ನೃತ್ಯ, ಬಂಜಾರ ಸಮುದಾಯದ ಮಹಿಳೆಯರ ನೃತ್ಯ ಆಕರ್ಷಣೀಯವಾಗಿತ್ತು. ಸ್ವತಃ ಮ್ಯಾರಥಾನ್‌ ರೂವಾರಿ ಅನಿಲ ಮೆಣಸಿನಕಾಯಿ ಅವರು ಮುಳಗುಂದ ನಾಕಾದಲ್ಲಿ ಬಂಜಾರ ನೃತ್ಯಕ್ಕೆ ಹೆಜ್ಜೆಹಾಕಿ ಪ್ರೋತ್ಸಾಹಿಸಿದರು. ಕ್ರೀಡಾಜ್ಯೋತಿಯನ್ನು ಆಯಾ ವಾರ್ಡ್‌ಗಳ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿ ಶುಭ ಹಾರೈಸಿ ಬೀಳ್ಕೊಡುತ್ತಿರುವುದು ಸಾಮಾನ್ಯವಾಗಿತ್ತು.

Advertisement

ಮ್ಯಾರಥಾನ್‌ ಆರಂಭಕ್ಕೂ ಮುನ್ನ 35ನೇ ವಾರ್ಡ್‌ ಪ್ರತಿನಿಧಿಸುವ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರು ಅನಿಲ ಮೆಣಸಿನಕಾಯಿ ಅವರಿಗೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ ನೀಡಿ ಶುಭಕೋರಿದರು. ಮ್ಯಾರಥಾನ್‌ದುದ್ದಕ್ಕೂ ಗೆಲುವಿನ ಓಟ ಕೈಗೊಂಡು ಗಮನ ಸೆಳೆದರು. ಕಳಸಾಪುರ ರಿಂಗ್‌ ರಸ್ತೆ ವೃತ್ತದಿಂದ ಆರಂಭವಾದ ಮ್ಯಾರಥಾನ್‌ ಬಸವೇಶ್ವರ ಶಾಲೆ ಹಿಂಭಾಗದ ರಸ್ತೆ, ಶ್ರೀ ಅಂಬಾಭವಾನಿ ದೇವಸ್ಥಾನ, ವೀರೇಶ್ವರ ನಗರ, ಮುಳಗುಂದ ನಾಕಾ, ನರಸಾಪುರ ಮೂಲಕ ರಂಗಪ್ಪಜ್ಜನ ಮಠಕ್ಕೆ ತಲುಪಿ ಮ್ಯಾರಥಾನ್‌ ಸಮಾಪ್ತಿಗೊಂಡಿತು.

ಗದಗ ಸ್ಫೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಅಧ್ಯಕ್ಷ ಸಿದ್ಧಲಿಂಗೇಶ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ವಿಜಯಲಕ್ಷ್ಮೀ ಮಾನ್ವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಮುತ್ತು ಮುಶಿಗೇರಿ, ಮಾಧೂಸಾ ಮೇರವಾಡೆ ಸೇರಿ ಸಾವಿರಾರು ಯುವಕರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಹಣ್ಣು-ಎಳನೀರಿನಿಂದ ತುಲಾಭಾರ: ಮ್ಯಾರಥಾನ್‌ ಹುಯಿಲಗೋಳ ನಾರಾಯಣರಾಯರ ವೃತ್ತ (ಟಾಂಗಾಕೂಟ) ತಲುಪಿದಾಗ ಅನಿಲ ಮೆಣಸಿನಕಾಯಿ ಅವರಿಗೆ ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ ಹಾಗೂ ಅನಿಲ ಮೆಣಸಿನಕಾಯಿ ಅಭಿಮಾನಿ ಬಳಗದವರು ಹಣ್ಣು ಹಂಪಲು ಹಾಗೂ ಎಳನೀರಿನಿಂದ ವಿಶೇಷ ತುಲಾಭಾರದ ಗೌರವ ಸಲ್ಲಿಸಿದರು. ಬಳಿಕ ಇದೇ ಹಣ್ಣುಗಳನ್ನು ಮ್ಯಾರಥಾನ್‌ ಓಟದಲ್ಲಿ ಪಾಲ್ಗೊಂಡವರಿಗೆ ಹಂಚಲಾಯಿತು.

ಗದಗ ಸ್ಫೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಆಕಾಡೆಮಿಯಿಂದ ಈಗಾಗಲೇ ಜಿಸಿಎಲ್‌, ಗದಗ ಹಬ್ಬ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಅವಳಿ ನಗರ ಗದಗ-ಬೆಟಗೇರಿಯಲ್ಲಿ ಕ್ರೀಡಾಪಟುಗಳಿಗೆ ಅದರಲ್ಲೂ ಮ್ಯಾರಥಾನ್‌ ಸ್ಪರ್ಧಿಗಳಿಗೆ ಒಂದು ಹೊಸ ಚೈತನ್ಯ ಮೂಡಿಸುವ ಉದ್ದೇಶದಿಂದ “ರನ್‌ ಫಾರ್‌ ವಿನ್‌’ ಆಯೋಜಿಸಲಾಗಿತ್ತು. ನಗರದ ಜನತೆ ಹಬ್ಬದ ರೀತಿ ಸಿದ್ಧತೆ ಮಾಡಿಕೊಂಡು, ಸ್ವಾಗತಿಸಿದ್ದು ಮತ್ತು ಎಲ್ಲೆಡೆ ಜನರು, ಯುವಕರಿಂದ ಸಿಕ್ಕ ಬೆಂಬಲ ನಮ್ಮ ಚಟುವಟಿಕೆ ಮತ್ತಷ್ಟು ಹೆಚ್ಚಿಸುವಂತೆ ಪ್ರೇರೇಪಿಸಿದೆ. ಅನಿಲ ಮೆಣಸಿನಕಾಯಿ, ಸಂಸ್ಥಾಪಕ ಅಧ್ಯಕ್ಷ, ಗದಗ ನ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next