Advertisement

ಭತ್ತ, ಈರುಳ್ಳಿಗೆ ಬೆಂಬಲ ಬೆಲೆ ನೀಡಿ 

06:00 AM Nov 28, 2018 | Team Udayavani |

ಬೆಂಗಳೂರು: ತೀವ್ರ ಬೆಲೆ ಕುಸಿತದಿಂದ  ಕಂಗಾಲಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಭತ್ತ ಹಾಗೂ
ಈರುಳ್ಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ತೀರ್ಮಾನಿಸಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕ್ವಿಂಟಾಲ್‌ “ಎ’ ಗ್ರೇಡ್‌ ಭತ್ತಕ್ಕೆ 1770 ರೂ., “ಬಿ’ಗ್ರೇಡ್‌ಗೆ 1750 ರೂ. ನಂತೆ 2 ಲಕ್ಷ ಟನ್‌ ಭತ್ತ ಖರೀದಿಸಲು ಆದೇಶ ಹೊರಡಿಸಲಾಗಿದೆ. ತಕ್ಷಣವೇ ಖರೀದಿ ಕೇಂದ್ರಗಳನ್ನು ಆರಂಭಿಸಿ, ರೈತರ ನೋಂ  ದಣಿ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅದೇ ರೀತಿ ಈರುಳ್ಳಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಕ್ವಿಂಟಾಲ್‌ ಈರುಳ್ಳಿಗೆ ಮೂಲ ಬೆಲೆ 700 ರೂ. ಜೊತೆಗೆ ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ 200 ರೂ. ಬೆಂಬಲ ಬೆಲೆ ನೀಡಲು ತೀರ್ಮಾನಿಸಲಾಗಿದೆ. ಎಪಿಎಂಸಿಗಳ ಮೂಲಕ ಈರುಳ್ಳಿ ಮಾರಾಟ ಮಾಡುವ
ರೈತರಿಗೆ ಈ ಯೋಜನೆಯ ಅನುಕೂಲ ದೊರೆಯಲಿದೆ ಎಂದು ಹೇಳಿದರು. 

ರಾಜ್ಯದ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಈ ವರ್ಷ 1.53 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಸುಮಾರು 29 ಲಕ್ಷ ಟನ್‌ ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಅದರಲ್ಲಿ ಎಪಿಎಂಸಿಗಳಿಗೆ ಕನಿಷ್ಠ 2.5 ಲಕ್ಷ
ಟನ್‌ ಈರುಳ್ಳಿ ಮಾರಾಟಕ್ಕೆ ಬರಲಿದ್ದು, ಅದನ್ನು ಖರೀದಿಗೆ ಆವರ್ತ ನಿಧಿಯಿಂದ 75 ಕೋಟಿ ರೂ. ಹಣ ಬಿಡುಗಡೆಗೆ 
ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಸತಿ ರಹಿತರಿಗೆ ನಿವೇಶನ: ರಾಜ್ಯದಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಕಂದಾಯ ಇಲಾಖೆಯಿಂದ 6747 ಎಕರೆ ಜಮೀನು ಗುರುತಿಸಿ ವಸತಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಲ್ಲದೇ ಖಾಸಗಿ ಮಾಲೀಕರಿಂದಲೂ 2
ಸಾವಿರ ಎಕರೆ ಜಮೀನು ಖರೀದಿ ಮಾಡಲಾಗಿದ್ದು, ಶೀಘ್ರವೇ ನಿವೇಶನ ರಹಿತರನ್ನು ಗುರುತಿಸಿ ನೀವೇಶನ ನೀಡಲಾಗುವುದು ಎಂದು ಹೇಳಿದರು. ಕಂದಾಯ ಇಲಾಖೆ ಮೂಲಕ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ನೀಡುವ ವೃದ್ಧಾಪ್ಯ, ವಿಧವಾ,ದಿವ್ಯಾಂಗರಿಗೆ ಮಾಸಾಶನ ನೀಡುವಲ್ಲಿ ತಾಂತ್ರಿಕ ದೋಷದಿಂದ ವಿಳಂಬವಾಗಿದ್ದು, ತಕ್ಷಣವೇ ಹಣ ಬಿಡುಗಡೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಆಯುಷ್ಮಾನ್‌ಭವ ಯೊಜನೆ ಜೊತೆಗೆ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಚಾಲನೆ ನೀಡಲಾಗಿದ್ದು, ಕಾಲಹರಣ ಮಾಡದೇ ಫ‌ಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗಾರಿಕಾ ವಿಷನ್‌ ಗ್ರೂಪ್‌ ರಚಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೂ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, 17 ಸಾವಿರ ಕೋಟಿ ವೆಚ್ಚದ ಪೆರಿಫೆರಲ್‌ ರಿಂಗ್‌ ರಸ್ತೆ ಜಾರಿಗೆ ತೀರ್ಮಾನ ಮಾಡಲಾಗಿದ್ದು, ಭೂಸ್ವಾಧೀನಕ್ಕೆ 4500 ಕೋಟಿ ರೂ. ಬಿಡುಗಡೆಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು
ಹೇಳಿದರು.

Advertisement

ಸಮ್ಮಿಶ್ರ ಸರ್ಕಾರದಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಶೇ. 43 ರಷ್ಟು ಹಣ ಖರ್ಚು ಮಾಡಿದ್ದು, ಯಡಿಯೂರಪ್ಪ ಅವರು ಭಯ ಪಡುವ 
ಅಗತ್ಯವಿಲ್ಲ. ಎಲ್ಲ ಯೋಜನೆಗಳಿಗೂ ಮೀಸಲಿಟ್ಟ ಹಣವನ್ನು ಸದ್ಭಳಕೆ ಮಾಡಿಕೊಳ್ಳುತ್ತೇವೆ. ಸಾಲ ಮನ್ನಾ ಯೋಜನೆಗೆ ಯಾವುದೇ ಇಲಾಖೆಯ ಹಣವನ್ನು ವರ್ಗಾಯಿಸುವುದಿಲ್ಲ.

● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next