Advertisement

ಕಡೂರು ತಾಲೂಕಿನಲ್ಲಿ ಲಾಕ್‌ಡೌನ್‌ಗೆ ಬೆಂಬಲ

05:04 PM Jul 06, 2020 | Naveen |

ಕಡೂರು: ರಾಜ್ಯ ಸರ್ಕಾರ ಕರೆ ನೀಡಿರುವ ಭಾನುವಾರದ ಲಾಕ್‌ಡೌನ್‌ಗೆ ಕಡೂರು ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಜನರು ಸ್ವಯಂಪ್ರೇರಿತರಾಗಿ ಹೊರಗೆ ಬಾರದೆ ಮನೆಯಲ್ಲಿಯೇ ಉಳಿದು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

Advertisement

ಪಟ್ಟಣದ ಮುಖ್ಯ ಬೀದಿಗಳು ಮತ್ತು ಬಡಾವಣೆಗಳ ಉಪ ಬೀದಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ವೃತ್ತಗಳಾದ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಕೆಎಲ್‌ವಿ ವೃತ್ತ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಖಾಲಿ-ಖಾಲಿಯಾಗಿ ಬಣಗುಡುತ್ತಿದ್ದವು. ಇಡೀ ಪಟ್ಟಣಕ್ಕೆ ಪಟ್ಟಣವೇ ಸ್ಥಬ್ದವಾಗಿದ್ದು ಒಂದೆರೆಡು ಬೈಕ್‌ ಗಳು ಓಡಾಡುತ್ತಿದ್ದ ದೃಶ್ಯ ಬಿಟ್ಟರೆ ಉಳಿದಂತೆ ಶೂನ್ಯ ಆವರಿಸಿತ್ತು. ರಾಜ್ಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಜನರೇ ಇಲ್ಲದೇ ಸ್ಮಶಾನ ಮೌನ ಆವರಿಸಿತ್ತು. ಪ್ರಯಾಣಿಕರಿಲ್ಲದೆ ಆಟೋಗಳು ಸಹ ರಸ್ತೆಗಿಳಿಯಲಿಲ್ಲ. ಪೆಟ್ರೋಲ್‌ ಬಂಕ್‌ ಗಳು ತೆರೆದಿದ್ದರೂ ಗ್ರಾಹಕರಿಲ್ಲದೇ ಅವೂ ಕೂಡ ಖಾಲಿ ಹೊಡೆಯುತ್ತಿದ್ದವು. ಮೆಡಿಕಲ್‌ ಅಂಗಡಿಗಳು ಇದಕ್ಕೆ ಹೊರತಾಗಿರಲಿಲ್ಲ. ಕೆಲವು ಔಷಧ ಅಂಗಡಿ, ಎಟಿಎಂಗಳು ತೆರೆದಿದ್ದರೂ ಅಲ್ಲಿಯೂ ಗ್ರಾಹಕರಿಲ್ಲದೆ ಖಾಲಿ ಇದ್ದವು.

ಹಾಲು ಮಾರಾಟ ಕೇಂದ್ರಗಳನ್ನು ಬೆಳಗ್ಗೆ ತೆರೆದು 7 ಗಂಟೆಯೊಳಗೆ ಮುಚ್ಚಿದರು. ಲಾಕ್‌ಡೌನ್‌ ಕಾರಣ ಶನಿವಾರ ಸಂಜೆಯೇ ತರಕಾರಿ, ಹಣ್ಣು ಮತ್ತು ದಿನಸಿ ವ್ಯಾಪಾರ ಜೋರಾಗಿಯೇ ನಡೆಯಿತು. ಕೆಲವು ತರಕಾರಿ ಅಂಗಡಿಗಳಂತೂ ತಮ್ಮ ಎಲ್ಲಾ ತರಕಾರಿಗಳನ್ನು ಮಾರಾಟ ಮಾಡಿ ಬಾಗಿಲು ಹಾಕುತ್ತಿದ್ದ ದೃಶ್ಯ ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next