ಮುದ್ದೇಬಿಹಾಳ: ತಂಗಡಗಿ ಗ್ರಾಪಂ ಪಿಡಿಒ ಉಮೇಶ ರಾಠೊಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಯಲ್ಲೇ ಸೋಮವಾರದಿಂದ ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ ನೇತೃತ್ವದಲ್ಲಿ ಗ್ರಾಮದ ಮಂಜುನಾಥ ಪೂಜಾರಿ, ಹುಲಗಪ್ಪ ಕಮಲದಿನ್ನಿ ಅವರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಈ ವೇಳೆ ದಲಿತ ಮುಖಂಡರಾದ ಡಿ.ಬಿ. ಮುದೂರ, ಹರೀಶ ನಾಟೀಕಾರ, ಬಸವರಾಜ ಪೂಜಾರಿ ಮಾತನಾಡಿ, ತಾಪಂ ಕಚೇರಿ ಎದುರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 12 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ವಹಿಸಿದ್ದಾರೆ, ಚರ್ಚೆಗೂ ಬರುತ್ತಿಲ್ಲ ಎಂದು ದೂರಿದರು.
3 ದಿನಗಳೊಳಗಾಗಿ ಬೇಡಿಕೆ ಈಡೇರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗ್ಗೆಯಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಉದಾಸೀನ ತೋರಿದ್ದರಿಂದ ಆಕ್ರೋಶಗೊಂಡ ದಲಿತ ಮುಖಂಡರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯ ಕೊಠಡಿ ಎದುರು ಸಾಮೂಹಿಕವಾಗಿ ಬೊಬ್ಬೆ ಹೊಡೆದರು.
Related Articles
ದಲಿತ ಸಂಘಟನೆಗಳ ಮುಖಂಡರಾದ ಪರಶುರಾಮ ಮುರಾಳ, ದೇವರಾಜ ಹಂಗರಗಿ, ಪ್ರಕಾಶ ಚಲವಾದಿ, ಶೇಖರ ಆಲೂರ, ರಾಜಶೇಖರ ಚಲವಾದಿ, ಸಂಗಮೇಶ ವಡ್ಡರ, ಹುಲಗಪ್ಪ ಚಲವಾದಿ, ಮಂಜು ಪೂಜಾರಿ, ಯಲ್ಲಾಲಿಂಗ ಚಲವಾದಿ, ಸಂತೋಷ ಅಜಮನಿ, ಪವಾಡೆಪ್ಪ ದೊಡಮನಿ ಮತ್ತಿತರರು ಇದ್ದರು.