ಚೆನ್ನೈ: ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಚೆನ್ನೈನಲ್ಲಿ ತಮಿಳುನಾಡು ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ದೆಹಲಿ ಸರ್ಕಾರದ ವಿರುದ್ಧ ಕೇಂದ್ರದ ಸುಗ್ರೀವಾಜ್ಞೆ ಕುರಿತು ನಾವು ಚರ್ಚಿಸಿದ್ದೇವೆ. ಇದು ಪ್ರಜಾಸತ್ತಾತ್ಮಕವಲ್ಲದ ಮತ್ತು ಸಂವಿಧಾನ ವಿರೋಧಿ. ಎಎಪಿ ಮತ್ತು ದೆಹಲಿ ಜನತೆ ಪರವಾಗಿ ಡಿಎಂಕೆ ನಿಲ್ಲುತ್ತದೆ ಎಂದು ಸಿಎಂ ಸ್ಟಾಲಿನ್ ಭರವಸೆ ನೀಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆಗೆ ಸಮಯಾವಕಾಶ ಕೇಳಿದ್ದೇನೆ ಮತ್ತು ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ. ಕಾಂಗ್ರೆಸ್ ನಮ್ಮನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಕೇಜ್ರಿವಾಲ್ ನನ್ನ ಉತ್ತಮ ಸ್ನೇಹಿತ…ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅನ್ನು ಬಳಸಿಕೊಂಡು ದೆಹಲಿ ಯುಟಿ ಮತ್ತು ಎಎಪಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ದೆಹಲಿಯಲ್ಲಿ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ತರಲಿದ್ದು, ಡಿಎಂಕೆ ಇದನ್ನು ತೀವ್ರವಾಗಿ ವಿರೋಧಿಸಲಿದೆ. ನಾವು ಇತರ ನಾಯಕರ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ನಾನು ಎಲ್ಲ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದು ಸ್ಟಾಲಿನ್ ಹೇಳಿದರು.
Related Articles
ತಮಿಳುನಾಡು ಸಚಿವರು ಮತ್ತು ಎಎಪಿ ತಮಿಳುನಾಡು ಕಾರ್ಯಕರ್ತರು ದೆಹಲಿ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.