ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾದಕ ವಸ್ತು ಮಾರಾಟಗಾರರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು, ಶನಿವಾರ ನಗರದ ಕೆಲ ಕೊರಿಯರ್ ಸಂಸ್ಥೆಗಳ ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಹೊರರಾಜ್ಯಗಳಿಂದ ಬಂದಿರುವಂತಹ ಪಾರ್ಸಲ್‌ಗಳು ಸೇರಿ ಸ್ಥಳೀಯ ಪಾರ್ಸಲ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಶ್ವಾನದಳದೊಂದಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜಪೇಟೆ, ಕಲಾಸಿಪಾಳ್ಯ, ಎಸ್‌ಆರ್ ನಗರ, ಮೈಸೂರು ರಸ್ತೆ ಸೇರಿ ವಿವಿಧೆಡೆ ಇರುವ ಬ್ಲೂಡಾರ್ಟ್, ಪ್ರೊಪೆ ಷ ನ ಲ್, ನ್ಯಾಷನಲ್ ಟ್ರಾವೆಲ್ಸ್, ಡಿಟಿಡಿಸಿ, ಜಿಎಂಎಸ್ ಕೋರಿಯರ್ ಸಂಸ್ಥೆಗಳ ಗೋದಾಮುಗಳ ಮೇಲೆ ಶ್ವಾನದಳ ಜತೆ ದಾಳಿ ನಡೆಸಿ ಪಾರ್ಸಲ್‌ಗಳನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಈ ಮೊದಲು ವಿದೇಶಗಳಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಹೀಗಾಗಿ, ಐದು ಕೊರಿಯರ್ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಹೆಚ್ಚಾಗಿ ಪೂರೈಸುತ್ತಿರುವ ಮಾಹಿತಿ ಇದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್‌ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರಿಯರ್ ಕಚೇರಿ, ಅಂಚೆ ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸೆ.9 ರಂದು ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಸಿಸಿಬಿ ಪೊಲೀಸರು 21 ಕೋಟಿ ರೂ. ಮೌಲ್ಯದ 606 ಮಾದಕವಸ್ತು ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದರು.