Advertisement

ಬೆಳಕಿನ ಹಬ್ಬಕ್ಕೆ ಮಳೆ ಪರಿಣಾಮ ಮಾರುಕಟ್ಟೆಯಲ್ಲಿ ಪೂರೈಕೆ, ವ್ಯಾಪಾರ ಕುಸಿತ

11:05 PM Oct 26, 2019 | mahesh |

ಮಹಾನಗರ: ದೀಪಾವಳಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಮನೆ ಮನೆಗಳಲ್ಲಿ ಸಂಭ್ರಮ ಜೋರಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳಿಗೆ ಸಿದ್ಧತೆ ನಡೆಯುತ್ತಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದ ಮಾರುಕಟ್ಟೆಗಳಲ್ಲಿ ಈ ಬಾರಿ ಬಿರುಸಿನ‌ ವ್ಯಾಪಾರ ಕಂಡುಬಂದಿಲ್ಲ.

Advertisement

ಅದಕ್ಕೆ ಮುಖ್ಯ ಕಾರಣ, ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ-ಚಂಡಮಾರುತ ಪ್ರಭಾವದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಾರುಕಟ್ಟೆಯಲ್ಲಿ ಈ ಬಾರಿ ಪಟಾಕಿಗೆ ಬೇಡಿಕೆ ಕಡಿಮೆಯಾಗಿದೆ. ಪರಿಸರ ಸ್ನೇಹಿ ದೀಪಾವಳಿಯತ್ತ ಜನ ಮನಸ್ಸು ಮಾಡಿದ್ದಾರೆ.

ತರಕಾರಿ ಪೊರೈಕೆ ಕಡಿಮೆ; ದರ ಏರಿಕೆ
ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ-ಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಬೇಡಿಕೆಯ ಜತೆ ಪೂರೈಕೆಯೂ ಕಡಿಮೆ ಇದೆ. ಮೂಡಿಗೆರೆ ಕಡೆಯಿಂದ ಬರುವ ಅಲಸಂಡೆ, ಬೆಂಗಳೂರು ಕಡೆಯಿಂದ ಬರುವ ಕೊತ್ತಂಬರಿ ಸೊಪ್ಪು, ದೊಣ್ಣೆಮೆಣಸು, ಸ್ಥಳೀಯ ಗೆಣಸು, ತೊಂಡೆಕಾಯಿ, ಮುಳ್ಳುಸೌತೆ ಪೂರೈಕೆ ಕಡಿಮೆಯಾಗಿದೆ. ಈರುಳ್ಳಿ, ದೊಣ್ಣೆ ಮೆಣಸು ದರ ಏರಿಕೆಯಾಗಿದೆ.

ಮಳೆ ಏಫೆಕ್ಟ್: ಹೂವಿನ ದರ ಏರಿಕೆ
ಸದ್ಯ ಜೋರಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೂವಿನ ಬೆಳೆ ಕುಂಠಿತವಾಗಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬಿದ್ದಿದ್ದು, ಹೂವಿನ ಬೆಲೆ ಏರಿಕೆಯಾಗಿದೆ. ಸಾಮಾನ್ಯವಾಗಿ ಬೆಂಗಳೂರು, ಮೈಸೂರು, ಹೊಸೂರು, ಚೆನ್ನರಾಯಪಟ್ಟಣ, ತುಮಕೂರು, ಕುಣಿಗಲ್‌, ಹಾಸನ, ಶಿವಮೊಗ್ಗ ಸಹಿತ ಕೆಲವೊಂದು ಕಡೆಗಳಿಂದ ನಗರದ ಮಾರುಕಟ್ಟೆಗೆ ಹೂವುಗಳು ಬರುತ್ತದೆ.

ಸಾಮಾನ್ಯ ದಿನಗಳಲ್ಲಿ 450 ರೂ. ಇರುವ ಒಂದು ಬಂಡಲ್‌ ಸೇವಂತಿಗೆ ಹೂವಿಗೆ ಸದ್ಯ 800 ರೂ. ಇದೆ. ಮಲ್ಲಿಗೆ ಹೂವು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟಗೆ ಬರುತ್ತಿದ್ದು, ಒಂದು ಅಟ್ಟಿಗೆ 850 ರೂ. ಇದೆ. ಸಮಾನ್ಯ ದಿನಗಳಲ್ಲಿ 400 ರೂ. ಇರುತ್ತದೆ. ಗೊಂಡೆ ಹೂವಿಗೆ ಕೆಜಿಗೆ 80 ರೂ. ಇದ್ದು, ಸಾಮಾನ್ಯ ದಿನ 50 ರೂ.ಗೆ ದೊರಕುತ್ತದೆ. ಸೇವಂತಿಗೆ ಕೆ.ಜಿ.ಗೆ 250 ರೂ., ಬಟನ್‌ರೋಸ್‌ಗೆ 240 ರೂ. ಇದೆ.

Advertisement

ಮಳೆ: ಖರೀದಿ ಕುಂಠಿತ
“ನಗರದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದರ ನೇರ ಪರಿಣಾಮ ವ್ಯಾಪಾರಸ್ಥರ ಮೇಲೆ ಬಿದ್ದಿದೆ. ಸಾಮಾನ್ಯವಾಗಿ ಹಬ್ಬಕ್ಕೆ ಒಂದೆರಡು ದಿನವಿರುವಾಗಲೇ ಮಾರುಕಟ್ಟೆಯಲ್ಲಿ ಬಿರುಸಿನಿಂದ ವ್ಯಾಪಾರ ನಡೆಯುತ್ತದೆ. ಆದರೆ ಮಳೆಯಿಂದಾಗಿ ಜನರು ಹೊರಗಡೆ ಬರುತ್ತಿಲ್ಲ’ ಎನ್ನುತ್ತಾರೆ ಸೆಂಟ್ರಲ್‌ ಮಾರುಕಟ್ಟೆಯ ವ್ಯಾಪಾರಸ್ಥರು.

ಬೆಳೆಯೂ ಕಡಿಮೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮುಕ್ಕಾಲು ಪಾಲು ಹೂವಿನ ವ್ಯಾಪಾರ ಕುಸಿತ ಕಂಡಿದೆ. ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಉತ್ತಮ ದರ್ಜೆಯ ಹೂವುಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮಣ್ಣಿನಲ್ಲಿ ನೀರಿನ ತೇವಾಂಶ ಜಾಸ್ತಿಯಾಗಿ ಕೆಲವೆಡೆ ಬೆಳೆಯೂ ಕಡಿಮೆಯಾಗಿದೆ.
 - ಸುರೇಶ್‌ ಪೈ, ಹೂವಿನ ವ್ಯಾಪಾರಿ

ಬೇಡಿಕೆ ಇಳಿಕೆ
ಮಂಗಳೂರಿಗೆ ತರಕಾರಿ ಬರುವ ಅನೇಕ ಕಡೆಗಳಲ್ಲಿ ಈಗಾಗಲೇ ಭಾರೀ ಮಳೆಯಾಗಿದೆ. ಇದೇ ಕಾರಣಕ್ಕೆ ತರಕಾರಿ ಪೂರೈಕೆ ಕಡಿಮೆ ಇದೆ. ದೀಪಾವಳಿ ಹಬ್ಬದ ಸಮಯದಲ್ಲಿಯೂ ತರಕಾರಿಗಳಿಗೆ ಬೇಡಿಕೆಯಿಲ್ಲ. ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ತರಕಾರಿ ಗಳು ಮಾರಾಟ ವಾಗುತ್ತಿದೆ.
– ಡೇವಿಡ್‌,ತರಕಾರಿ ವ್ಯಾಪಾರಸ್ಥರು

Advertisement

Udayavani is now on Telegram. Click here to join our channel and stay updated with the latest news.

Next