ಚಿಕ್ಕೋಡಿ: ತಾಲೂಕಿನ ವಾಳಕಿ ಮತ್ತು ಪಟ್ಟಣಕುಡಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುತ್ತಿಲ್ಲ ಏಕೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಅಭಿಯಂತರ ಆನಂದ ಬಣಕಾರ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವ್ರ ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ಕೋವಿಡ್ 19 ಮುಂಜಾಗ್ರತಾ ಕ್ರಮಗಳ ಕುರಿತಾಗಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೋವಿಡ್ 19 ಕುರಿತು ಚಿಕ್ಕೋಡಿ-ಸದಲಗಾ ಕ್ಷೇತ್ರದ 28 ಗ್ರಾಪಂಗಳಿಗೆ ಭೇಟಿ ನೀಡಿದಾಗ ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಪ್ರಸ್ತಾಪವಾಗಿಲ್ಲ. ವಾಳಕಿ-ಪಟ್ಟಣಕುಡಿಯಲ್ಲಿ ಸಮರ್ಪಕ ನೀರು ಬರುತ್ತಿಲ್ಲವೆಂದು ಜನ ಆರೋಪಿಸಿದ್ದು, ಸರಿಪಡಿಸಬೇಕು ಎಂದರು.
ಹಣ್ಣು, ತರಕಾರಿ ಹಾಗೂ ವಿವಿಧ ಬೆಳೆಗಳಿಗೆ ಹಾನಿಯಾದ ಕುರಿತು ತೋಟಗಾರಿಕೆ ಹಾಗೂಕೃಷಿ ಅಧಿ ಕಾರಿಗಳು ಸರ್ವೇ ಮಾಡಿ ಮಾಹಿತಿ ಕಲೆ ಹಾಕಬೇಕು ಎಂದ ಅವರು ಬೇಸಿಗೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಹೆಸ್ಕಾಂ ಅಧಿಕಾರಿಗಳು ಟಿಸಿ ಹಾಗೂ ಸಮರ್ಪಕ ವಿದ್ಯುತ್ ನೀಡಬೇಕು. ಅನಾವಶ್ಯಕವಾಗಿ ತೊಂದರೆ ಕೊಡಬಾರದೆಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ 19 ತಡೆಯುವಲ್ಲಿ ಸಾಕಷ್ಟು ಉತ್ತಮವಾದ ಕಾರ್ಯ ಮಾಡಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ಶ್ಲಾಘಿಸಿದ ಅವರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯ ನೀಡುವಂತೆ ಸಿಡಿಪಿಒ ದೀಪಾ ಕಾಳೆ ಅವರಿಗೆ ಸೂಚಿಸಿದರು. ತಾಲೂಕಿನ ನಾಯಿಂಗ್ಲಜ್ ಗ್ರಾಮ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಸರಾಯಿ ದಂಧೆ ನಡೆಯುತ್ತಿದ್ದು, ಅಧಿಕಾರಿಗಳು ಗಮನ ಹರಿಸಿ ತಡೆಯಬೇಕು ಎಂದರು. ತಹಶೀಲ್ದಾರ್ ಎಸ್. ಎಸ್.ಸಂಪಗಾವಿ, ತಾಪಂ ಇಒ ಕೆ.ಎಸ್.ಪಾಟೀಲ, ಡಿವೈಎಸ್‌ಪಿ ಮನೋಜ ನಾಯಿಕ, ಸಿಪಿಐ ಆರ್. ಆರ್.ಪಾಟೀಲ, ಸಿಡಿಪಿಒ ದೀಪಾ ಕಾಳೆ, ಟಿಎಚ್‌ಒ ಡಾ|ವಿವಿ ಶಿಂಧೆ ಇತರರಿದ್ದರು.