ಎಸೆಸ್ಸೆಲ್ಸಿ ಫೇಲಾದ ಮೇಲೆ ಅಪ್ಪನಿಗೆ ನನ್ನ ಬಗೆಗಿನ ತಲೆ ನೋವು ಜಾಸ್ತಿಯಾಯಿತು. ಇವನಿಗೆ ಮದುವೆ ಮಾಡಿಬಿಡೋಣ ಅಂತಲೂ ಯೋಚನೆ ಮಾಡಿದ್ದರು. ಆದರೆ, ಕೂತು ತಿನ್ನುವಷ್ಟು ಆಸ್ತಿ ಇರಲಿಲ್ಲ. ಎಲ್ಲದಕ್ಕೂ ಮದುವೆ ಅನ್ನೋದು ಪರಿಹಾರ ಅಲ್ಲ. ಹೆಣ್ಣು ಕೊಡುವ ಬೀಗರೇ ಅಳಿಯನಿಗೆ ಕೆಲಸ ಕೊಡಿಸಲಿ ಅನ್ನೋದು ಅಪ್ಪನಿಗೆ ಇತ್ತೋ ಏನೋ.. ಸರಿಯಾದ ಉದ್ಯೋಗ ಗಳಿಸುವಿಕೆಯಿಂದ ತಪ್ಪಿಸಿಕೊಳ್ಳಲು ಮದುವೆ ಎಂಬುದು ರಹದಾರಿಯೇ ಆಗಿತ್ತು; ಆ ಕಾಲದಲ್ಲಿ.ಪಾಸ್ ಆಗೇ ಆಗುತ್ತೇನೆ ಅಂದುಕೊಂಡಿದ್ದವನಿಗೆ ಫೇಲ್ ಎದುರಾಗಿ, ಅಪ್ಪ ನನ್ನನ್ನು ಅಂಚೆ ಕಚೇರಿಗೆ ಬಂದ ಪೋಸ್ಟ್‌ಗಳನ್ನು ಹಂಚಲು, ಅವರ ಬದಲಿ ಸಹಾಯಕನಾಗಿ ಬಳಸಲು ಅಸ್ತ್ರಮಾಡಿಕೊಂಡರು. ತಿಂಗಳಿಗೆ 20ರೂ. ಕೊಡೋರು. ಅದೇ ನನ್ನ ಮೊದಲ ಪ್ರೊಫೆಷನ್. ಇದಾದ ನಂತರ ಮಧ್ಯಾಹ್ನದ ಹೊತ್ತು ಹೋಟೆಲ್‌ನಲ್ಲಿ ಸಪ್ಲೆ„ಯರ್ ಆದೆ; ಅಪ್ಪನಿಗೆ ಹೇಳದೇ.
ರಾತ್ರಿ ಮನೆಗೆ ಬಂದಾಗ ನಾನಾ ನಮೂನೆಯ ಅನುಮಾನಗಳು ಅವರಲ್ಲಿತ್ತು. ಆದರೂ, ಒಳ್ಳೆ ಉದ್ಯೋಗ ಹಿಡಿಯಬೇಕು ಇಲ್ಲವೇ ಕೂತು ತಿನ್ನುವಷ್ಟು ಹಣ ಮಾಡಿಟ್ಟುಕೊಳ್ಳಬೇಕು. ಇವರಡೇ ನನ್ನ ಕಣ್ಣ ಮುಂದೆ ಇದ್ದ ಗುರಿಗಳು. ಹಾಗಾಗಿ, ಹೋಟೆಲ್‌ಗೆ ಸೇರಿದೆ, ಪ್ರಸ್ಟೀಜ್ ಇಷೂÂ ಆಗುತ್ತದೆ ಅಂತ ತಿಳಿದು ಮೆಲ್ಲಗೆ , ಚಾರ್ಟೆಡ್ ಅಕೌಂಟೆಂಟ್‌ರ ಹತ್ತಿರ ಕೆಲಸಕ್ಕೆ ಸೇರಿದೆ. ಮನೆಯಲ್ಲಿ ಒಳ್ಳೆ ಕೆಲಸ ಅಂತ ಹೇಳಿದ್ದೆನಾದರೂ, ಅಲ್ಲಿ ಕಸ ಗುಡಿಸುವ, ಕಾಫಿ ತಂದು ಕೊಡುವುದೇ ಮುಖ್ಯ ವೃತ್ತಿಯಾಗಿತ್ತು. ಪಾಪ, ನಮ್ಮ ಬಾಸ್ ಬಹಳ ಒಳ್ಳೆಯವ. ನನಗೆ ಮತ್ತೆ 10ನೇತರಗತಿ ಪರೀಕ್ಷೆ ಕಟ್ಟಿಸಿದ. ಊಟದ ಸಮಯ, ಸಂಜೆಯ ಹೊತ್ತು ಓದುತಲಿದ್ದೆ. ಹೇಗೋ ಮಾಡಿ, ಆ ವರ್ಷ ಪಾಸು ಮಾಡಿದೆ. ಇಂಗ್ಲೀಷ್ ತಕ್ಕಮಟ್ಟಿಗೆ ಇತ್ತು. ಟ್ಯಾಲಿಗೆ ಕಳುಹಿಸಿದರು. ಸಂಜೆ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡೆ. ಹೀಗೆ ಮಾಡುತ್ತಿದ್ದಾಗ ಅಪ್ಪನ ಪೋಸ್ಟ್ ಮನ್ ಕೆಲಸ ಮತ್ತೆ ನನ್ನ ಕೈ ಹಿಡಿಯಿತು. ಬಂದ ಕಾಗದ, ಗಿಫ್ಟ್ಗಳನ್ನು ಬಹಳ ನಿಯತ್ತಾಗಿ ವಾರಸುದಾರರಿಗೆ ತಲುಪಿಸುತ್ತಿದ್ದೆ. ಒಂದು ದಿನ ಬೀಟ್ ಬದಲಾಯಿತು. ಆ ಬೀಟ್‌ನಲ್ಲಿದ್ದವರು ಆ ಪ್ರದೇಶದ ಯಾರಿಗೂ ಪಾರ್ಸೆಲ್‌ಗಳನ್ನು ಕೊಡುತ್ತಿರಲಿಲ್ಲವಂತೆ. ಆತ ನನಗೆ ಗೆಳೆಯನೂ ಆಗಿದ್ದರಿಂದ, ಅವನ ಬೀಟ್‌ನಲ್ಲಿ ಕೆಲಸ ಮುಂದುರಿಸುವಾಗಲೇ ಕಂಪ್ಲೇಂಟ್‌ಗಳು ನನ್ನನ್ನೂ ಆವರಿಸಿಕೊಂಡವು. ಪ್ರತಿಷ್ಠಿತ ರಾಜಕೀಯ ವ್ಯಕ್ತಿ ಪ್ರಬಲವಾಗಿ ಕಂಪ್ಲೇಂಟ್ ಮಾಡಿದರು. ವಿಚಾರಣೆ ನಡೆಯಿತು. ಅವನ ಗೆಳೆಯನಾಗಿದ್ದರ ತಪ್ಪಿಗೆ ನಾನೂ ಕೆಲಸ ಕಳೆದುಕೊಂಡೆ.
ಮುಂದೇನು? ಬೆಂಗಳೂರೇ ಬೇಡ ಅಂತ ಸೋದರ ಮಾವನ ಊರಿಗೆ ಹೋಗಿ, ಅವರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದೆ. ನಿಯತ್ತಾಗಿದ್ದರೆ ಬದುಕಬಹುದು ಅಂತ ತಿಳಿದದ್ದೇ ಅಲ್ಲಿ.
ಸಪ್ಲೆ„ಯರ್, ಮಧ್ಯೆ ಮಧ್ಯೆ ಕ್ಯಾಷಿಯರ್ ಆದೆ. ಬಹಳ ನಾಜೂಕಾಗಿ, ಗ್ರಾಹಕರ ಮನಃಸ್ಥಿತಿಗೆ ತಕ್ಕಂತೆ ಸಪ್ಲೆ„ ಮಾಡುವುದನ್ನು, ಪ್ರೀತಿಯಿಂದ ಮಾತನಾಡುವುದನ್ನು ಕಲಿತೆ. ರಾಜ್‌ಕುಮಾರ್‌ರಿಂದ ಪ್ರಭಾವದಿಂದ ವಿಶಿಷ್ಟ ಮ್ಯಾನರಿಸಂ ಕೂಡ ರೂಢಿಯಾಯಿತು. ಇದರಿಂದ, ನನ್ನ ಸಪ್ಲೆ„ಅನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿತು. ನಾನು ಇದ್ದಾಗ ಗಿರಾಕಿಗಳ ಸಂಖ್ಯೆ ಏರ ತೊಡಗಿತು, ಇಡೀ ಊರಲ್ಲಿ ಚಿರಪರಿಚತನಾದೆ. ಸೋದರಮಾವನವರಿಗೆ ವಯಸ್ಸಾಯಿತು. ಹೋಟೆಲ್ ನಡೆಸುವ ಹೊಣೆಗಾರಿಕೆ ನನ್ನ ಮೇಲೆ ಬಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿ ಇವತ್ತು ನಿವೃತ್ತನಾಗಿದ್ದೇನೆ.
ಆದರೆ, ಆವತ್ತು ತೀರ್ಮಾನಿಸಿದಂತೆ ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇನೆ. ಈಗ ನೆಮ್ಮದಿಯ ಜೀವನ.
-ಅಪ್ಪಿರಾವ್, ಕದಿರೇನಹಳ್ಳಿ