Advertisement

ಸಿಎಂ ವಿರುದ್ಧ ಹಕ್ಕು ಚ್ಯುತಿ : ಆದೇಶ ಕಾಯ್ದಿರಿಸಿದ ಸ್ಪೀಕರ್‌

03:45 AM Mar 24, 2017 | |

ವಿಧಾನಸಭೆ:ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸದನಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹಕ್ಕು ಚ್ಯುತಿ ಮಂಡಿಸಿದ ಪ್ರಸಂಗ ಗುರುವಾರ ನಡೆಯಿತು.

Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಜೆಪಿ ಸರ್ಕಾರದಲ್ಲಿ ಒಂದು ಪೈಸೆಯೂ ಪ್ರೋತ್ಸಾಹಧನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಪ್ಪು ಮಾಹಿತಿ ನೀಡಿದ ಸದನ ಹಾಗೂ ರಾಜ್ಯದ ಜನರ ದಾರಿ ತಪ್ಪಿಸಿದ್ದಾರೆ. ಇದರಿಂದ ನಮ್ಮ ಹಕ್ಕಿಗೆ ಚ್ಯುತಿಯಾಗಿದೆ. ಮುಖ್ಯಮಂತ್ರಿ ಉದ್ದೇಶ ಪೂರ್ವಕವಾಗಿಯೇ ಈ ರೀತಿಯ ಹೇಳಿಕೆ ನೀಡಿ, ಬಿಜೆಪಿ ವಿರುದ್ಧ ರಾಜಕೀಯ ಲಾಭ ಪಡೆಯುವ ದೃಷ್ಠಿಯಿಂದ ಈ ಹೇಳಿಕೆ ನೀಡಿದ್ದಾರೆ. ಇದು ಸದನ ಮತ್ತು ರಾಜ್ಯದ  ಜನತೆಗೆ ತಪ್ಪು ಸಂದೇಶ ರವಾನೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ವಿರುದ್ಧ ಹಕ್ಕು ಚ್ಯುತಿ ಮಂಡಿಸುವುದಾಗಿ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹಕ್ಕು ಚ್ಯುತಿ ಮಂಡಿಸಿದರು.

ಅಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೂ ಮತ್ತು ಸಹಾಯಕಿಯರಿಗೆ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ಹೆಚ್ಚಳ ಮಾಡಿದ್ದೇವೆ. 2006-07 ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 550 ರೂ. ಇತ್ತು. 2008-09 ರಲ್ಲಿ 750 ರೂ.ಗೆ ಹೆಚ್ಚಳ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಪ್ರತಿ ವರ್ಷ ಹೆಚ್ಚಳ ಮಾಡಲಾಗಿದ್ದು, 2013-14 ರ ವರೆಗೆ 2300 ರೂ.ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರ ಮಾತಿಗೂ ಬೆಲೆ ಕೊಡದೇ ನೀವು ಸುಳ್ಳುಗಾರರು, ಭಂಡರು, ಒಂದು ಪೈಸೆಯನ್ನೂ ಹೆಚ್ಚಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಒತ್ತಿ ಒತ್ತಿ ಹೇಳಿ ಸದನದ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಸಚಿವೆ ಉಮಾಶ್ರೀ ಹಾಗೂ ಕಾಂಗ್ರೆಸ್‌ ಸಿದ್ದುನ್ಯಾಮಗೌಡ, ಮುಖ್ಯಮಂತ್ರಿಯವರು ಮೊದಲಿಗೆ ಬಿಜೆಪಿ ಗೌರವ ಧನ ಹೆಚ್ಚಿಸಿಲ್ಲ ಎಂದು ಹೇಳಿದರಾದರೂ ನಂತರ ಒಮ್ಮೆ 200 ರೂ. ಹಾಗೂ ಮತ್ತೂಮ್ಮೆ 500 ರೂ. ಹೆಚ್ಚಿಸಿದ್ದಾರೆ. ಸಬೆjಕ್ಟ್ ಟು ಕರೆಕ್ಷನ್‌ ಅಂತಲೂ ಹೇಳಿದ್ದಾರೆ ಎಂದು ಸಮರ್ಥನೆ ನೀಡಿದರು. ಆದರೆ, ಬಿಜೆಪಿ ಸದಸ್ಯರು ಇದನ್ನು ಒಪ್ಪಿಕೊಳ್ಳಲಿಲ್ಲ.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಆರೋಗ್ಯ ಸಚಿವ ರಮೇಶ್‌ ಕುಮಾರ್‌, ಬಿಜೆಪಿಯ ಹಕ್ಕು ಚ್ಯುತಿ ಮಂಡನೆ ಸ್ವಾಗತ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತಿಲ್ಲ. ಅವರೂ ಕೂಡ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ತಪ್ಪು ತಿದ್ದಿಕೊಳ್ಳಲು ಮನುಷ್ಯನಿಗೆ ಅವಕಾಶವೇ ಇಲ್ಲವೇ ? ಕೋರ್ಟ್‌ಗಳಲ್ಲಿ ನ್ಯಾಯಾಧೀಶರಾದವರೆಲ್ಲ ನ್ಯಾಯ ಕೊಡುವುದಿಲ್ಲ. ನ್ಯಾಯ ಮತ್ತು ತೀರ್ಪಿಗೆ ಸಾಕಷ್ಟು ವ್ಯತ್ಯಾಸವಿದೆ. ಮುಖ್ಯಮಂತ್ರಿ ಬಾವೋದ್ವೇಗಕ್ಕೆ ಒಳಗಾಗಿ ಆ ರೀತಿಯ ಹೇಳಿಕೆ ನೀಡಿರುವುದರಿಂದ ಅವರು ತಮ್ಮ ತಪ್ಪನ್ನು ಸರಿ ಮಾಡಿಕೊಂಡಿದ್ದಾರೆ ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಂತೆ ಸ್ಪೀಕರ್‌ಗೆ ಮನವಿ ಮಾಡಿಕೊಂಡರು.

Advertisement

ರಮೇಶ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ಉತ್ತಮ್‌ ಚಂದ್‌ ಗಾಂಧಿ ಎಂಬ ಗುಮಾಸ್ತನ ಕಥೆ ಹೇಳಿ, ಇತಿಹಾಸಕ್ಕೂ ವರ್ತಮಾನಕ್ಕೂ ವ್ಯತ್ಯಾಸ ಇದೆ ಎಂದರು. ಬಿಜೆಪಿಯ ಸಿಟಿ ರವಿ ಮಾತನಾಡಿ, ಮುಖ್ಯಮಂತ್ರಿಗಳು ಹಿರಿಯರು, ಮೂವತ್ತು ವರ್ಷ ಶಾಸಕರಾಗಿ ಅನುಭವ ಇರುವವರು, ನಮ್ಮಂಥ ಸಣ್ಣವರು ಮಾತು ತಪ್ಪಿ ಹೇಳಿದ್ದರೆ ಒಪ್ಪ ಬಹುದಿತ್ತು ಎಂದರು.

ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ಆವಾಗಲೇ ಸರಿಪಡಿಸಿಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಣ ನೀಡಿರುವ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಹಕ್ಕುಚ್ಯುತಿಗೆ ವ್ಯಾಪ್ತಿಗೆ ಬರುವುದಿಲ್ಲ. ಈ ಪ್ರಕರಣವನ್ನು ಕೈ ಬಿಡಬೇಕೆಂದು ಮನವಿ ಮಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಮುಖ್ಯಮಂತ್ರಿಯಾದವರಿಗೆ ತಾಳ್ಮೆ, ಸಂಯಮ ಮುಖ್ಯ, ಸಾಕಷ್ಟು ಕೆಲಸದ ಒತ್ತಡ ಇರುತ್ತದೆ. ಹಾಗಂತ ಪ್ರತಿಪಕ್ಷಗಳ ಕಾರ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇನ್ನು ಮುಂದಾದರೂ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ಹಾಗೂ ಸ್ಪೀಕರ ಕೊಡುವ ತೀರ್ಮಾನಕ್ಕೆ ಬದ್ದನಾಗುವುದಾಗಿ ತಿಳಿಸಿದರು. ಆಡಳಿತ ಮತ್ತು ಪ್ರತಿಪಕ್ಷದ ವಾದ ಆಲಿಸಿದ ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ತೀರ್ಪು ಕಾಯ್ದಿರಿಸಿದರು.

ಹಕ್ಕು ಚ್ಯುತಿ ಮಂಡನೆ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಉತ್ತಮ್‌ ಚಂದ್‌ ಗಾಂಧಿ ಎಂಬ ಗುಮಾಸ್ತನ ಕಥೆ ಹೇಳಿ, ಆತ ತನಗೆ ಬಂದಿರುವ ಉಡುಗೊರೆಯನ್ನು ರಾಜನಿಗೆ ನೀಡಲು ಹೋಗಿದ್ದಾ, ಆದರೆ, ರಾಜ ಗುಮಾಸ್ತನಿಗೆ ಬಂದಿರೋದು ನೀನೇ ಇಟ್ಟುಕೊ ಎಂದು ವಾಪಸ್‌ ಕಳುಹಿಸಿದಾ. ಆದರೆ, ನಮ್ಮ ರಾಜಕಾರಣಿಗಳು ಯಾರು ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ವಾಚ್‌ ಪ್ರಕರಣವಾದ ಮೇಲೆ ಮುಖ್ಯಮಂತ್ರಿಗೆ ಸಚಿವ ರಾಯರೆಡ್ಡಿ ಬೆಲೆ ಬಾಳುವ ಗಿಫ್ಟ್ ಕೊಟ್ಟಿದ್ದನ್ನು ಬಿಸಾಕಿದ್ದಾರೆ ಎಂದು ರಾಯರೆಡ್ಡಿ ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಬಿಸಾಕಿಲ್ಲಾ ವಾಪಸ್‌ ನೀಡಿದ್ದಾರೆ. ಅದು ನನ್ನ ಸ್ವಂತ ಹಣದಲ್ಲಿ ಖರೀದಿಸಿದ್ದೇನೆ. ಅದಕ್ಕೆ ರಸೀದಿ ಇದೆ ಎಂದು ಹೇಳಿದರು. ಆಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರಸೀದಿ ಇದ್ದರೆ ಸದನಕ್ಕೆ ತಂದು ಒಪ್ಪಿಸಿ, ಇಲ್ಲದಿದ್ದರೆ ಕಷ್ಟವಾಗುತ್ತೆ ಎಂದಾಗ ಸದನದಲ್ಲಿ ನಗೆಯ ಅಲೆ ಮೂಡಿತು.

Advertisement

Udayavani is now on Telegram. Click here to join our channel and stay updated with the latest news.

Next