Advertisement
ಮಹಾನಗರ: ನೃತ್ಯ ಕ್ಷೇತ್ರದಲ್ಲಿ ಆಕೆಯದ್ದು ಅಮೋಘ ಸಾಧನೆ, ಭರತನಾಟ್ಯದಲ್ಲಿ ರ್‍ಯಾಂಕ್, ಹಲವಾರು ರಿಯಾಲಿಟಿ ಶೋಗಳಲ್ಲಿ ಬಹುಮಾನಗಳು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ ಪ್ರತಿಭೆ, ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ, ಸಿನಿಮಾ ಕ್ಷೇತ್ರದಿಂದಲೂ ಹತ್ತಾರು ಆಫರ್ ಗಳು ! ಇದು ಮಂಗಳೂರಿನ ನೃತ್ಯಪಟು, ನಗರದ ಕೆನರಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜ್ಞಾನಾ ಐತಾಳ್ ಅವರ ಸಾಧನೆಯ ನೋಟಗಳು. ಬಾಲ್ಯದಿಂದಲೇ ನೃತ್ಯ ಕ್ಷೇತ್ರದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಜ್ಞಾನ ಐತಾಳ್ ಇದೀಗ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಫೈನಲ್ ಹಂತಕ್ಕೆ ತಲುಪಿದ್ದು, ಕರಾವಳಿ ಭಾಗದ ಈ ಪ್ರತಿಭೆ ಕನ್ನಡಿಗರ ಮನಗೆಲ್ಲು ವಿಶ್ವಾಸದಲ್ಲಿದ್ದಾರೆ. ಈ ಶೋನಲ್ಲಿ ಜ್ಞಾನ ಅವರು ಮಾಸ್ಟರ್ ಆಗಿ ಸ್ಪರ್ಧಿಸುತ್ತಿದ್ದು, ಸುರತ್ಕಲ್ ನ ರಕ್ಷಾ ಅವರು ಡ್ಯಾನ್ಸರ್ ಆಗಿ ಸಾಥ್ ನೀಡುತ್ತಿದ್ದಾರೆ. ಕೊರಿಯೋಗ್ರಾಫರ್ ತಾರಕ್ ಇವರನ್ನು ತರಬೇತುಗೊಳಿಸುತ್ತಿದ್ದಾರೆ.
ನೃತ್ಯಗುರು ಬಾಲಕೃಷ್ಣ ಮಂಜೇಶ್ವರ ಅವರಿಂದ ನೃತ್ಯ ಅಭ್ಯಾಸ ಮಾಡಿರುವ ಜ್ಞಾನ ಐತಾಳ್ ಅವರು ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಶೇ. 98 ಅಂಕ ಪಡೆದು ಪ್ರಥಮ ರ್‍ಯಾಂಕ್ ಹಾಗೂ ಸೀನಿಯರ್ ವಿಭಾಗದಲ್ಲಿ ಶೇ. 93 ಅಂಕ ಪಡೆದು ಮಂಗಳೂರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರಮಟ್ಟದ ಭರತನಾಟ್ಯದಲ್ಲಿ 2 ವರ್ಷ ವಿನ್ನರ್ ಆಗಿ ಮೂಡಿದ್ದಾರೆ. ಕಲಿಕೆಯಲ್ಲೂ ಇವರು ಮುಂದಿನ ಎಸೆಸೆಲ್ಸಿಯಲ್ಲಿ ಉತ್ತಮ ಅಂಕದ ಸಾಧನೆಗಾಗಿ ಕೆನರಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಕುಣಿಯೋಣ ಬಾರಾ ವಿನ್ನರ್
ವಿವಿಧ ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರವಾದ ಹಲವಾರು ರಿಯಾಲಿಟಿ ಶೋನಲ್ಲಿ ಏಳು ವರ್ಷದ ಜ್ಞಾನಾ ಅವರು ವಿನ್ನರ್, ರನ್ನರ್‌ಅಪ್, ಟಾಪ್ 20ಯಲ್ಲಿ ಸ್ಥಾನ ಪಡೆದಿದ್ದರು. ತನ್ನದೇ ಆದ ಹೆಜ್ಜೆನಾದ ಎಂಬ ನೃತ್ಯ ತಂಡವನ್ನು ಕಟ್ಟಿಕೊಂಡು ಈಗಾಗಲೇ 500ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. 250ಕ್ಕೂ ಅಧಿಕ ನೃತ್ಯಗಳಿಗೆ ಕೊರಿಯೋಗ್ರಾಫಿಯನ್ನೂ ಮಾಡಿದ್ದಾರೆ.
Related Articles
ತನ್ನ ನೃತ್ಯ ತಂಡದ ಒಂದು ವರ್ಷದ ಗಳಿಕೆಯಲ್ಲಿ ಹಣ ಉಳಿಸಿಕೊಂಡು ಪ್ರತಿವರ್ಷ ಕ್ಯಾನ್ಸ್‌ರ್ ಪೀಡಿತ ಮಗುವಿನ ಚಿಕಿತ್ಸೆಗಾಗಿ ಒಂದಷ್ಟು ಮೊತ್ತವನ್ನು ನೀಡುತ್ತಾರೆ. ನಗರದ KMCಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ| ಹರ್ಷಪ್ರಸಾದ್ ಅವರ ಮಾರ್ಗದರ್ಶನದಂತೆ ಅವರು ಸೂಚಿಸಿದ ಮಗುವಿನ ಔಷಧ ವೆಚ್ಚವನ್ನು ಭರಿಸುತ್ತಾರೆ.
Advertisement
ಗೆಲ್ಲುವ ವಿಶ್ವಾಸ ನಮಗಿದೆಜ್ಞಾನಾ ಅವರಿಗೆ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸುವಂತೆ ಆಫರ್ ಗಳು ಬಂದರೂ ನಾವು ಅದನ್ನು ನಿರಾಕರಿಸಿದ್ದೇವೆ. ಏಕೆಂದರೆ ಸದ್ಯ ಆಕೆಯ ಕಲಿಕೆಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದು ಪೂರ್ಣಗೊಂಡ ಬಳಿಕವಷ್ಟೇ ಸಿನೆಮಾ ಆಫರ್ ಗಳನ್ನು ಸ್ವೀಕರಿಸುವ ಬಗ್ಗೆ ಯೋಚಿಸುತ್ತೇವೆ. ಈಗ ಆಕೆ ರಿಯಾಲಿಟಿ ಶೋ ಒಂದರ ಅಂತಿಮ ಹಂತಕ್ಕೆ ಬಂದಿದ್ದು, ತೀರ್ಪುಗಾರರಿಂದಲೂ ಆಕೆಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವ ಮೂಲಕ ನಮ್ಮೂರಿನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ.
– ನಾಗೇಂದ್ರ ಐತಾಳ್, ಜ್ಞಾನಾ ಅವರ ತಂದೆ