Advertisement

IPL 2024; ರಾಜಸ್ಥಾನ್ ಮಣಿಸಿ ಸನ್‌ರೈಸರ್ ಹೈದರಾಬಾದ್‌ ಫೈನಲ್‌ಗೆ ಲಗ್ಗೆ

12:42 AM May 25, 2024 | Team Udayavani |

ಚೆನ್ನೈ: ಬೌಲರ್‌ಗಳ ಮೇಲಾಟವಾಗಿ ಪರಿಣಮಿಸಿದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನವನ್ನು 36 ರನ್ನುಗಳಿಂದ ಬಗ್ಗುಬಡಿದ ಸನ್‌ರೈಸರ್ ಹೈದರಾಬಾದ್‌ ಐಪಿಎಲ್‌ ಫೈನಲ್‌ಗೆ ಲಗ್ಗೆ ಹಾಕಿದೆ.

Advertisement

ರವಿವಾರದ ಪ್ರಶಸ್ತಿ ಕಾಳಗದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಸೆಣಸಲಿದೆ. ಇವೆರಡೂ ಲೀಗ್‌ ಹಂತದ ಟೇಬಲ್‌ ಟಾಪರ್‌ ತಂಡಗಳೆಂಬುದು ವಿಶೇಷ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್‌ 9 ವಿಕೆಟಿಗೆ 175 ರನ್‌ ಪೇರಿಸಿದರೆ, ರಾಜಸ್ಥಾನ್‌ 7 ವಿಕೆಟಿಗೆ 139 ರನ್‌ ಮಾಡಿ ಶರಣಾಯಿತು.

ಚೇಸಿಂಗ್‌ ವೇಳೆ ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದು ಯಶಸ್ವಿ ಜೈಸ್ವಾಲ್‌ ಮಾತ್ರ (42). ಕ್ಯಾಡ್‌ಮೋರ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ ತಲಾ 10 ರನ್‌ ಮಾಡಿ ವಾಪಸಾದರು. ಭಾರೀ ಭರವಸೆಯ ರಿಯಾನ್‌ ಪರಾಗ್‌ ಗಳಿಕೆ ಬರೀ 6 ರನ್‌. ಆರ್‌. ಅಶ್ವಿ‌ನ್‌ ಖಾತೆಯನ್ನೇ ತೆರೆಯಲಿಲ್ಲ. ಸ್ಪಿನ್ನರ್‌ ಶಾಬಾಜ್‌ ಅಹ್ಮದ್‌ ಈ ಅವಧಿಯಲ್ಲಿ ಜೈಸ್ವಾಲ್‌, ಪರಾಗ್‌ ಮತ್ತು ಅಶ್ವಿ‌ನ್‌ ವಿಕೆಟ್‌ ಕಿತ್ತು ಹೈದರಾಬಾದ್‌ಗೆ ಮೇಲುಗೈ ಒದಗಿಸಿದರು. 79 ರನ್ನಿಗೆ ರಾಜಸ್ಥಾನದ ಅರ್ಧದಷ್ಟು ಮಂದಿಯ ಆಟ ಕೊನೆಗೊಂಡಿತು. ಹೆಟ್‌ಮೈರ್‌, ಪೊವೆಲ್‌ ಕೂಡ ಕೈಕೊಟ್ಟರು.

ಬೆದರಿಸಿದ ಟ್ರೆಂಟ್‌ ಬೌಲ್ಟ್
ಒಂದೆಡೆ ಹೈದರಾಬಾದ್‌ ತಂಡದ ರನ್‌ ಪ್ರವಾಹ, ಇನ್ನೊಂದೆಡೆ ವೇಗಿ ಟ್ರೆಂಟ್‌ ಬೌಲ್ಟ್ ಅವರ ಘಾತಕ ಬೌಲಿಂಗ್‌ ದಾಳಿ ಪವರ್‌ ಪ್ಲೇ ಅವಧಿಯ ಮೇಲಾಟಕ್ಕೆ ಕಾರಣವಾಯಿತು.

ಬೌಲ್ಟ್ ಅವರ ಮೊದಲ 5 ಎಸೆತಗಳಲ್ಲಿ 13 ರನ್‌ ಸೋರಿಹೋಯಿತು. ಅಭಿಷೇಕ್‌ ಶರ್ಮ ಸಿಕ್ಸರ್‌, ಬೌಂಡರಿ ಬಾರಿಸಿ ಆಕ್ರಮಣಕಾರಿ ಆಟಕ್ಕೆ ಮುನ್ನುಡಿ ಬರೆದರು. ಅಷ್ಟೇ, ಅಂತಿಮ ಎಸೆತದಲ್ಲಿ ಬೌಲ್ಟ್ ಸೇಡು ತೀರಿಸಿಕೊಂಡರು. ಕ್ಯಾಡ್‌ಮೋರ್‌ಗೆ ಕ್ಯಾಚ್‌ ನೀಡಿದ ಶರ್ಮ (12) ಪೆವಿಲಿಯನ್‌ ಸೇರಿಕೊಂಡರು.

Advertisement

ಇದರೊಂದಿಗೆ ಟ್ರೆಂಟ್‌ ಬೌಲ್ಟ್ ಪಂದ್ಯದ ಮೊದಲ ಓವರ್‌ನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ದಾಖಲೆಯನ್ನು 29ಕ್ಕೆ ಏರಿಸಿದರು. ಭುವನೇಶ್ವರ್‌ ಕುಮಾರ್‌ ದ್ವಿತೀಯ ಸ್ಥಾನದಲ್ಲಿದ್ದಾರೆ (27).
ಬೌಲ್ಟ್ ತಮ್ಮ 3ನೇ ಓವರ್‌ನಲ್ಲಿ ಅವಳಿ ಆಘಾತವಿಕ್ಕಿದರು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ರಾಹುಲ್‌ ತ್ರಿಪಾಠಿ ಮತ್ತು ತಂಡಕ್ಕೆ ಮರಳಿ ಕರೆ ಪಡೆದ ಐಡನ್‌ ಮಾರ್ಕ್‌ರಮ್‌ ವಿಕೆಟ್‌ ಹಾರಿಸಿದರು. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರನೌಟಾಗಿ ಅಳುತ್ತ ಕುಳಿತ್ತಿದ್ದ ತ್ರಿಪಾಠಿ ಇಲ್ಲಿ ಬಿರುಸಿನ ಆಟಕ್ಕಿಳಿದರು. ಆದರೆ ತುಸು ಮೇಲ್ಮಟ್ಟದಲ್ಲಿ ಹಾದು ಹೋಗುತ್ತಿದ್ದ ಬೌಲ್ಟ್ ಎಸೆತವನ್ನು ಕೆಣಕಲು ಹೋಗಿ ಶಾರ್ಟ್‌ ಥರ್ಡ್‌ ಮ್ಯಾನ್‌ನಲ್ಲಿದ್ದ ಚಹಲ್‌ ಕೈಗೆ ಕ್ಯಾಚ್‌ ಹೋಗುವುದನ್ನು ಕಾಣಬೇಕಾಯಿತು. ತ್ರಿಪಾಠಿ ಗಳಿಕೆ 15 ಎಸೆತಗಳಿಂದ 37 ರನ್‌ (5 ಫೋರ್‌, 2 ಸಿಕ್ಸರ್‌). ಎರಡೇ ಎಸೆತಗಳ ಅಂತರದಲ್ಲಿ ಮಾರ್ಕ್‌ರಮ್‌ (1) ಕೂಡ ಚಹಲ್‌ಗೆ ಕ್ಯಾಚ್‌ ನೀಡಿಯೇ ವಾಪಸಾದರು.

ಇದರೊಂದಿಗೆ ಬೌಲ್ಟ್ 2024ರ ಐಪಿಎಲ್‌ ಪವರ್‌ ಪ್ಲೇಯಲ್ಲಿ ಅತ್ಯಧಿಕ 12 ವಿಕೆಟ್‌ ಉರುಳಿಸಿದ ಹಿರಿಮೆಗೆ ಪಾತ್ರರಾದರು. ಇಲ್ಲಿಯೂ ಭುವನೇಶ್ವರ್‌ಗೆ 2ನೇ ಸ್ಥಾನ (10 ವಿಕೆಟ್‌). ಹಾಗೆಯೇ ಟಿ20 ಪಂದ್ಯಗಳ ಪವರ್‌ ಪ್ಲೇಯಲ್ಲಿ 100 ವಿಕೆಟ್‌ ಉರುಳಿಸಿದ 3ನೇ ಬೌಲರ್‌ ಎಂಬ ಹೆಗ್ಗಳಿಕೆಯೂ ಬೌಲ್ಟ್ ಅವರದಾಯಿತು (101). ಉಳಿದಿಬ್ಬರೆಂದರೆ ಡೇವಿಡ್‌ ವಿಲ್ಲಿ (128) ಮತ್ತು ಭುವನೇಶ್ವರ್‌ ಕುಮಾರ್‌ (118). ಪವರ್‌ ಪ್ಲೇಯಲ್ಲಿ ಹೈದರಾಬಾದ್‌ 68 ರನ್‌ ಗಳಿಸಿತು. ಈ ಅವಧಿಯಲ್ಲಿ ಸಿಡಿದದ್ದು 8 ಬೌಂಡರಿ, 3 ಸಿಕ್ಸರ್‌. ರಾಜಸ್ಥಾನ್‌ 3 ವಿಕೆಟ್‌ ಉರುಳಿಸಿ ತಿರುಗೇಟು ನೀಡಿತು.

3 ವಿಕೆಟ್‌ ಉರುಳುವ ತನಕ ಸೈಲೆಂಟ್‌ ಆಗಿದ್ದ ಟ್ರ್ಯಾವಿಸ್‌ ಹೆಡ್‌ ಅನಂತರ ತಮ್ಮ ನೈಜ ಆಟಕ್ಕೆ ಕುದುರುವ ಸೂಚನೆ ನೀಡಿದರೂ ಭಾರೀ ಯಶಸ್ಸು ಕಾಣಲಿಲ್ಲ. 9ನೇ ಓವರ್‌ನ ಅಂತಿಮ ಎಸೆತದಲ್ಲಿ ಸಂದೀಪ್‌ ಶರ್ಮ ಈ ಬಹುಮೂಲ್ಯ ವಿಕೆಟ್‌ ಹಾರಿಸಿದರು. ಹೆಡ್‌ ಗಳಿಕೆ 28 ಎಸೆತಗಳಿಂದ 34 ರನ್‌ (3 ಫೋರ್‌, 1 ಸಿಕ್ಸರ್‌). ಹೆಡ್‌-ಹೆನ್ರಿಚ್‌ ಕ್ಲಾಸೆನ್‌ 30 ಎಸೆತಗಳಿಂದ 42 ರನ್‌ ಪೇರಿಸಿದರು. 10 ಓವರ್‌ ಮುಕ್ತಾಯಕ್ಕೆ ಹೈದರಾಬಾದ್‌ 4ಕ್ಕೆ 99 ರನ್‌ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next