Advertisement
ನಿಮ್ಮ ಬಾಲ್ಯದ ಹಳ್ಳಿ ಬದುಕು ನಿಮ್ಮ ವ್ಯಕ್ತಿತ್ವದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ?ನಮ್ಮದು ಕೃಷಿಕ ಕುಟುಂಬ. ಆ ಗ್ರಾಮೀಣ ಪರಿಸರದ ಜೊತೆಗೆ ಬೆರೆತುಕೊಂಡ ನನ್ನ ತಂದೆ-ತಾಯಿ. ನನ್ನ ತಂದೆ ರಾತ್ರಿ ನಮ್ಮನ್ನು ಕೂರಿಸಿ ಕುಮಾರವ್ಯಾಸ ಭಾರತವನ್ನು ಗಮಕದ ರೀತಿ ಹಾಡುತ್ತಿದ್ದರು. ನಾವು ಅದನ್ನು ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆವು. ಅವರು ಕಲಿತದ್ದು ಕೇವಲ 5ನೇ ತರಗತಿ. ನಮ್ಮ ಅಮ್ಮ ಕಲಿತದ್ದು 4ನೆಯ ತರಗತಿವರೆಗೆ. ಆದರೆ, ಆಕೆ ಯಕ್ಷಗಾನದ ಪ್ರಸಂಗಗಳನ್ನು ನಮಗೆ ಓದಿ ಹೇಳುವುದು ಮಾತ್ರವಲ್ಲ, ನಮ್ಮಿಂದ ಅರ್ಥ ಹೇಳಿಸುತ್ತಿದ್ದರು. ಬಾಲ್ಯದಲ್ಲಿ ದೊರೆತ ಈ ಅಭಿರುಚಿ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ನನಗೆ ಈಗಲೂ ಗಮಕ ಗಾಯನ, ಕವಿತೆಗಳನ್ನು ಹಾಡುವುದೆಂದರೆ ಬಹಳ ಇಷ್ಟ. ಅದಕ್ಕೆ ಕಾರಣ ನನ್ನ ಬಾಲ್ಯದ ಅನುಭವಗಳೇ ಇರಬೇಕು. ನನ್ನ ಎಲ್ಲ ಕವಿತೆಗಳನ್ನು ನಾನು ಹಾಡುತ್ತೇನೆ. ಇದಕ್ಕೆ ಸಂಗೀತದ ಶಾಸ್ತ್ರಬದ್ಧವಾದ ಜ್ಞಾನವೇನೂ ಇಲ್ಲ. ಆದರೂ ನನ್ನ ಕವಿತೆಗಳ ಶೈಲಿ ಹಾಗೆಯೇ.
ವಿವಾಹಪೂರ್ವದಲ್ಲೇ ನಾನು ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲಿನಲ್ಲಿ ಕೆಲವು ತಿಂಗಳು ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದೆ. ಇದೇ ಅನುಭವದ ಆಧಾರದಲ್ಲಿ ಮುಂಬಯಿಗೆ ಬಂದಮೇಲೆ ಇಲ್ಲಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರ್ಪಡೆಗೊಂಡೆ. ಇಲ್ಲಿ 11 ವರ್ಷಗಳ ಕಾಲ ಶಿಕ್ಷಕಿಯಾಗಿದ್ದೆ. ಮುಂದೆ ಎಂಎ ಪಾಸ್ ಮಾಡಿ 25 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕಿಯಾಗಿ, ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಆಮಂತ್ರಿತ ಪ್ರಾಧ್ಯಾಪಕಿಯಾಗಿಯೂ ಕೆಲಸ ಮಾಡಿರುವೆ. ಇದು ಯೋಗಾಯೋಗಾ. ಈ ಹಂತದಲ್ಲಿ ಅನೇಕ ಹಿರಿಯ-ಕಿರಿಯ ಸಾಹಿತಿಗಳ ಒಡನಾಟ ದೊರಕಿದೆ. ಮುಂಬಯಿಯಲ್ಲಿ ಆ ಸಮಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳು, ಕನ್ನಡವನ್ನೇ ಧೇನಿಸುವ ಸಾಕಷ್ಟು ಸಂಘಸಂಸ್ಥೆಗಳು ನನಗೆ ವಿಪುಲವಾದ ಅವಕಾಶಗಳನ್ನೂ ವೇದಿಕೆಯನ್ನು ನೀಡಿ ನನ್ನನ್ನು ಬೆಳೆಸಿವೆ. ನನ್ನ ಮಾತಿನ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ನಾನು ಅಭಾರಿ. ನಿಮ್ಮ ಸಾಹಿತ್ಯದ ಬರವಣಿಗೆ ತಡವಾಗಿ ಆರಂಭವಾಗಿದೆ. ಇದಕ್ಕೆ ಕಾರಣಗಳಿವೆಯೇ?
ನಾನು ಶಿಕ್ಷಕಿಯಾಗಿ ನನ್ನನ್ನು ತೊಡಗಿಸಿಕೊಂಡವಳು. ಅಧ್ಯಯನ, ಕಲಿಕೆಗೆ ಹೆಚ್ಚು ಗಮನ ನೀಡಿದೆ. ಜೊತೆಗೆ ಗಮಕಕ್ಕೆ, ವೇದಿಕೆಯಲ್ಲಿ ವಾಗ್ಮಿಯಾಗಿ ವ್ಯಾಖ್ಯಾನ ನೀಡುವುದರಿಂದ ಬರವಣಿಗೆ ಸ್ವಲ್ಪ ತಡವಾಯಿತು. ಆದರೆ, ಕವಿತೆಯ ಹೊರತುಪಡಿಸಿ ಸಾಹಿತ್ಯದ ಉಳಿದ ಪ್ರಕಾರಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಆರಂಭದ ಹಂತದಲ್ಲಿ ಸಣ್ಣಕತೆಗಳು, ವೈಚಾರಿಕ ಲೇಖನಗಳನ್ನು ಆಗಿನ ಪ್ರಜಾಮತ ಪತ್ರಿಕೆಗೆ ಮುಂಬಯಿಂದಲೇ ಕಳುಹಿಸುತ್ತಿದ್ದೆ. ಕವಿತೆ ಮಾತ್ರ ಸಲ್ಪ ತಡವಾಗಿಯೇ ಆರಂಭವಾಯಿತು. ನನ್ನ ಕಲಿಕೆಯ ಹಂತದಲ್ಲಿ ಕವನಗಳ ಬಗ್ಗೆ ಆಸಕ್ತಿಯಿದ್ದರೂ ನಾನು ಕಾಲೇಜು ಅಧ್ಯಾಪನದಲ್ಲಿ ತೊಡಗಿಕೊಂಡಾಗ ಬೇರೆ ಕವಿತೆಗಳನ್ನು ಓದಿ, ಮೆಚ್ಚಿ ನಂತರ ಬರೆಯುವ ಪ್ರಯತ್ನ ಮಾಡಿದೆ. ಹೀಗೆ ಸ್ವಲ್ಪ ತಡವಾಗಿಯೇ ನನ್ನಲ್ಲಿ ಸೃಜನಾತ್ಮಕ ಬರವಣಿಗೆ ಹುಟ್ಟಿಕೊಂಡಿತು. ಮುಂಬಯಿಯ ಸಚೇತನ, ತಾಯಿನುಡಿ ಪತ್ರಿಕೆಗಳಿಗೆ ಕವಿತೆ, ಲೇಖನ ಬರೆಯತೊಡಗಿದೆ. ಆದರೆ, ನನ್ನ ಕತೆಗಳು ಕೈಬಿಟ್ಟು ಹೋದವು.
Related Articles
ದಕ್ಷಿಣಕನ್ನಡದವಳಾದ ನನಗೆ ಮುಖ್ಯವಾಗಿ ಆಕರ್ಷಿಸಿದುದು ಶಿವರಾಮ ಕಾರಂತರ ಪ್ರಾದೇಶಿಕತೆ. ಜೊತೆಗೆ ಇಲ್ಲಿ “ಸಿರಿ’ಯಂತಹ ಮೌಖೀಕ ಕಾವ್ಯ ಪಾಡªನಗಳನ್ನು ಕೇಳಿಕೊಂಡು ಬೆಳೆದವಳು. ಕಾರಂತರ ಸ್ತ್ರೀ ಪಾತ್ರಗಳ ಸ್ವಾತಂತ್ರ್ಯಪ್ರಿಯತೆ ನನಗೆ ಇಷ್ಟವಾಯಿತು. ತೀರ ನಿಷ್ಠುರವಾದಿಗಳಾದ ಕಾರಂತರ ಬಗ್ಗೆ ಹೇಳಲು ಎಲ್ಲರಲ್ಲೂ ಸ್ವಲ್ಪ ಹಿಂಜರಿಕೆ ಇತ್ತು. ನನ್ನ ಗುರುಗಳಾದ ಪ್ರೊ. ಚಿದಾನಂದ ದೀಕ್ಷಿತರ ಒತ್ತಾಸೆಯ ಮೇರೆಗೆ ನಾನು ಈ ಕೆಲಸವನ್ನು ಕೈಗೆತ್ತಿಕೊಂಡೆ. ಅಲ್ಲದೆ ಕಾರಂತರ ಸಮಕಾಲೀನ ಹಿಂದಿ ಲೇಖಕ ಪ್ರೇಮಚಂದ್ ಹಾಗೂ ಮರಾಠಿ ಲೇಖಕ ಮಡಗೊಳಕರ್ ಅವರ ಕೃತಿಗಳನ್ನು ಓದಿಕೊಂಡಿದ್ದೆ. ಅವರು ಭಾವುಕತೆಗೆ ಹೆಚ್ಚು ಒತ್ತುಕೊಟ್ಟರೆ, ಕಾರಂತರು ಸತ್ಯ ಶೋಧಕರಾಗಿ ನಿರ್ಭಾವುಕತೆಯಿಂದ ಬರೆದಿದ್ದಾರೆ ಎಂದು ಅನಿಸಿದ್ದರಿಂದ ನನಗೆ ಕಾರಂತರು ಹೆಚ್ಚು ಎತ್ತರವಾಗಿಯೆ ಕಂಡರು. ನನಗೆ ಪಿಹೆಚ್.ಡಿ ದೊರಕಿದ್ದು ನನ್ನ ನಿವೃತ್ತಿಯ ನಂತರ. ಬಾಲ್ಯದಲ್ಲಿ ನನಗೆ ಡಾಕ್ಟರ್ ಆಗಬೇಕು ಎಂದಿದ್ದ ಹಂಬಲ ಈ ಬಗೆಯಾಗಿ ಈಡೇರಿತು.
Advertisement
ನಿಮ್ಮ ಮೊದಲನೆಯ ಕವನಸಂಕಲನ ಬಿಡುಗಡೆಗೊಂಡಿದ್ದು ತುಳುವಿನಲ್ಲಿ ಅಲ್ಲವೆ?ಹೌದು, ತುಳು ನನ್ನ ಮಾತೃ ಭಾಷೆ. ದೆಹಲಿಯಲ್ಲಿದ್ದ ಪತ್ರಕರ್ತ ಬಾಲಕೃಷ್ಣ ಸಾಮಗರು ಮುಂಬಯಿಯಲ್ಲಿ 2 ದಿನಗಳ ತುಳು ಸಮ್ಮೇಳನ ನಡೆಸಿದ ನಂತರ ಆ ಭಾಷೆಯಲ್ಲಿ ಬರೆಯಲು ಮನಸ್ಸು ಮಾಡಿದ್ದು. ಆದರೆ, ಆಶ್ಚರ್ಯವೆಂದರೆ ನನ್ನ ತುಳು ಕವನಸಂಕಲನ ಪಿಂಗಾರ ಬೆಳಕಿಗೆ ಬಂದ ನಂತರವೇ ನಿನಾದ ಕನ್ನಡ ಕವನಸಂಕಲನ ಪ್ರಕಟವಾದದ್ದು. ನಂತರದಲ್ಲಿ ನಿರಂತರವಾಗಿ ತುಳು ಕೃಷಿಯನ್ನು ಮುಂದುವರಿಸುತ್ತ ಬಂದಿದ್ದೇನೆ. ಸುಮಾರು 9 ಕೃತಿಗಳು ಬಿಡುಗಡೆಗೊಂಡಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಒಂದು ಅವಧಿಗೆ ಸದಸ್ಯಳಾಗುವ ಗೌರವ ಸಿಕ್ಕಿದೆ. ಮುಂಬಯಿಯ “ಕಲಾ ಸೌರಭ’ ಸಂಸ್ಥೆ ನನ್ನ ತುಳು ಹಾಡುಗಳ ಧ್ವನಿಸುರುಳಿ ತಂದಿದೆ. ಅಖೀಲ ಭಾರತ ತುಳು ಸಮಾವೇಶಗಳ ಅಧ್ಯಕ್ಷತೆಯ ಗೌರವ ಜನ ನನಗೆ ನೀಡಿದ್ದಾರೆ. ಆರು ದಶಕಗಳಿಗೂ ಮಿಕ್ಕಿದ ನನ್ನ ಮುಂಬಯಿ ಬದುಕಿನಲ್ಲಿ ಇಲ್ಲಿಯ ತುಳು-ಕನ್ನಡಿಗರು ಪ್ರೀತಿಯಿಂದ “ಅಕ್ಕ’ ಎಂದು ಕರೆದು ವೇದಿಕೆ ನೀಡಿದ್ದಾರೆ. ಕೇಂದ್ರ ಸರಕಾರದಲ್ಲಿ ಅಧಿಕಾರಿಯಾಗಿದ್ದ ನನ್ನ ಗಂಡನಿಗೆ ಉದ್ಯೋಗದ ನಿಮಿತ್ತ ಆಗಾಗ ವರ್ಗವಾಗುತ್ತಿತ್ತು. ಮೂರು ಮಕ್ಕಳನ್ನು ನಿಭಾಯಿಸುವುದು, ನನ್ನ ಉದ್ಯೋಗ, ನನ್ನ ಸಾಹಿತ್ಯಿಕ ಚಟುವಟಿಕೆಗಳು, ಇವೆಲ್ಲದರಲ್ಲಿ ನಾನು ಕೊಂಚ ಬಳಲಿದ್ದೆ. ಆದರೆ, ಧೈರ್ಯ ಒಂದೇ ನನ್ನ ಸಂಗಾತಿ. ಜೊತೆಗೆ ನನ್ನ ಆಸೆಗಳಿಗೆ ನೀರೆರೆದು ಪೋಷಿಸಿದ ನನ್ನ ಬಾಳಸಂಗಾತಿಯ ಸಹಾಯ, ಸಹಕಾರಗಳು ನನ್ನ ಜೀವನಾಡಿ. ನಾನು ಮುಂಬಯಿ ವಿಶ್ವವಿದ್ಯಾನಿಲಯದ ಅಭ್ಯಾಸ ಮಂಡಳಿ, ಬೋರ್ಡ್ ಆಫ್ ಸ್ಟಡೀಸ್‌ನ ಸದಸ್ಯೆಯಾಗಿ, ಮಹಾರಾಷ್ಟ್ರ ಸರಕಾರದ ಕನ್ನಡ ಭಾಷಾ ಸಮಿತಿ, ಭಾಷಾ ಮಂಡಳಿಗಳ ಸದಸ್ಯೆಯಾಗಿ ನಿವೃತ್ತಿಯವರೆಗೂ ಕಾರ್ಯನಿರ್ವಹಣೆ ಮಾಡಿದ್ದೇನೆ. ಈಗಲೂ ಸದಾ ಚಟುವಟಿಕೆಯಲ್ಲಿ ಇದ್ದೇನೆ. ತುಳುವಿನಲ್ಲಿ ಪಿಂಗಾರ, ನಾಗಸಂಪಿಗೆ, ಸಂಕ್ರಾಂತಿ ಎಂಬ ಕವನ ಸಂಕಲನಗಳು, ಕರಜನ (ಲೇಖನಗಳು), ಪದಪಬ್ ಕಣ್ಣಾರೋ (ತುಳು ಭಾವಗೀತೆ), ಗಿರ್ ಗಿರ್ ಗಿರಿಜಸಭಾಯಿ (ತುಳು ಅಂಕಣ ಬರಹ), ಪೊಣ್ಣ ಉಡಲ್ ಬೆಂಗª ಕಡಲ್ (ಅನುವಾದಿತ ತುಳು ನಾಟಕ), ಕಲಾತಪಸ್ವಿ ಕೆ. ಕೆ. ಹೆಬ್ಟಾರ (ವ್ಯಕ್ತಿಚಿತ್ರ) ಸೇರಿ ತುಳುವಿನಲ್ಲಿ ವಿಪುಲವಾಗಿ ಬರೆದಿದ್ದಾರೆ. ಕನ್ನಡದಲ್ಲಿ ನಿನಾದ, ಅಂತರಗಂಗೆ, ಪಯಣ, ನನ್ನ ದೋಣಿ ನಿನ್ನ ತೀರ, ಮೌನದ ಕಿಟಕಿಯೊಳಗೆ ಎಂಬ ಕವನಸಂಕಲಗಳನ್ನು ಬರೆದಿದ್ದಾರೆ. ಎರಡು ಪ್ರವಾಸ ಕಥನ, ಏಳು ಸಂಪಾದಿತ ಕೃತಿಗಳನ್ನೂ ಹೊರತಂದಿದ್ದಾರೆ. ಒಟ್ಟು ಕೃತಿಗಳು 40 ! ಪ್ರಸ್ತುತ ಮುಂಬೈಯ ಕುರ್ಲಾದಲ್ಲಿ ವಾಸವಾಗಿದ್ದಾರೆ. “ಕಬಿತೆ ಬರೆಪಿನ ಸುನೀತಕ್ಕ’ ಎಂದರೆ ಎಲ್ಲರಿಗೆ ಗೊತ್ತಿದೆ. ಮುಂಬಯಿಯಲ್ಲಿರುವ ಬರಹಗಾರರಿಗೆ ಸುನೀತಾ ಶೆಟ್ಟಿ ಎಂದರೆ ಅಕ್ಕನ ಹಾಗೆ. ಜನ್ಮ, ಜಾತಿ, ಲಿಂಗ, ಅಂತಸ್ತು, ಅಹಂಕಾರ ಮೊದಲಾದ ಬಂಧನಗಳನ್ನು ದಾಟಿ, ಮನುಷ್ಯತ್ವದತ್ತ ತುಡಿಯುವ ಭಾವವೊಂದು ಅವರ ಕವಿತೆ-ಬರಹಗಳಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುತ್ತದೆ. 85ರ ಹರೆಯಲ್ಲಿಯೂ ಏನಾದರೂ ಓದುತ್ತ, ಬರೆಯುತ್ತ ಕ್ರಿಯಾಶೀಲರಾಗಿರುವ “ಸುನೀತಕ್ಕ’ 40ರಷ್ಟು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳನ್ನು ಓದಿ ಅಭಿನಂದಿಸಬಹುದು : 022-25227033 ಪೂರ್ಣಿಮಾ ಸುರೇಶ್