Advertisement

ಸುಬ್ರಹ್ಮಣ್ಯ : ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸುನಿಲ್‌ ಭೇಟಿ

09:16 AM Aug 04, 2022 | Team Udayavani |

ಸುಬ್ರಹ್ಮಣ್ಯ : ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟ ಸ್ಥಳಕ್ಕೆ ಸಚಿವ ಸುನಿಲ್‌ ಕುಮಾರ್‌ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಆ ಬಳಿಕ ಸಚಿವರು ಪಂಜದಲ್ಲಿರುವ ಮೃತ ಮಕ್ಕಳ ಅಜ್ಜನ ಮನೆಗೆ ಭೇಟಿ ನೀಡಿ ತಂದೆ- ತಾಯಿ, ಮನೆಯವರಿಗೆ ಸಾಂತ್ವನ ಹೇಳಿದರು.

Advertisement

ಮಳೆಹಾನಿ ಪ್ರದೇಶಗಳಿಗೆ ಭೇಟಿ
ಮಳೆಹಾನಿಗೆ ಒಳಗಾದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು. ಹಾನಿಗೆ ಒಳಗಾದವರಿಗೆ ಕಾನೂನು ಚೌಕಟ್ಟಿನೊಳಗೆ ಪರಿಹಾರ ನೀಡುವ ಕಾರ್ಯ ನಡೆಸಲಾಗಿದೆ. ಕೃಷಿಹಾನಿ ಬಗ್ಗೆಯೂ ಪರಿಹಾರ ನೀಡಲಾಗುತ್ತದೆ ಎಂದರು.

ಸಚಿವರು ಮಳೆಹಾನಿಗೊಳಗಾದ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಸೇತುವೆ ಹಾನಿ, ರಸ್ತೆ ಹಾನಿ, ಕೃಷಿ ಹಾನಿ, ಮನೆ ಹಾನಿ, ಮನೆ ಕುಸಿತ, ಗುಡ್ಡ ಕುಸಿತ ಸೇರಿದಂತೆ ಮಳೆಹಾನಿ ಘಟನ ಸ್ಥಳಗಳಿಗೆ ತೆರಳಿ ವೀಕ್ಷಣೆ ನಡೆಸಿದರು.

ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾ. ಪಂ. ವ್ಯಾಪ್ತಿಯ ಮಳೆಹಾನಿ ಪ್ರದೇಶಕ್ಕೆ ತೆರಳಿದ ಸಚಿವರು ಮಳೆಯ ರುದ್ರನರ್ತನಕ್ಕೆ ನಲುಗಿದ ಹರಿಹರ ಪೇಟೆ ಹಾಗೂ ಕಲ್ಮಕಾರಿನ ಸ್ಥಿತಿ ಕಂಡು ದಿಗ್ಬ್ರಮೆ ವ್ಯಕ್ತಪಡಿಸಿ, ಇಲ್ಲಿನ ಜನರಿಗೆ ಆದಷ್ಟು ಬೇಗ ಸಂಪರ್ಕ ಕಲ್ಪಿಸುವ ತುರ್ತು ಕಾರ್ಯಕ್ಕೆ ಅಧಿಕಾರಿಗಳು ಗಮನಹರಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಅಂಗಡಿ ಹಾನಿ: ಪರಿಹಾರಕ್ಕೆ ಪ್ರಯತ್ನ
ಮನೆ ಹಾನಿಗೆ 95 ಸಾವಿರ ರೂ. ನೀಡಲಾಗಿದೆ. ಮನೆ ನಿರ್ಮಿಸುವುದಿದ್ದಲ್ಲಿ 4 ಲಕ್ಷ ರೂ. ನೀಡಲಾಗುವುದು. ಅಂಗಡಿಗಳಿಗೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲ. ಆದರೂ ಸಿಎಂ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್‌ ಘೋಷಿಸಲು ಮನವಿ ಮಾಡಲಿದ್ದೇನೆ. ಅಂಗಡಿ ಹಾನಿಗೂ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಸುನಿಲ್‌ ಕುಮಾರ್‌ ಪ್ರತಿಕ್ರಿಯಿಸಿದರು.

Advertisement

ಯೇನೆಕಲ್ಲು: ಮನೆಗಳಿಗೆ ಭೇಟಿ
ಭಾರೀ ಮಳೆಗೆ ಹಾನಿಗೊಳಗಾದ ಯೇನೆಕಲ್ಲಿನ ಕುಶಾಲಪ್ಪ, ರವಿ, ಮತ್ತಿತರರ ಮನೆಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯವರಿಂದ ಮಾಹಿತಿ ಪಡೆದು ಕೊಂಡರು. ಆ ಬಳಿಕ ಹಾನಿಗೊಳಗಾದ ಯೇನೆ ಕಲ್ಲಿನ ಹೆದ್ದಾರಿಯ ಸೇತುವೆಯನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್‌, ಪುತ್ತೂರು ಎಸಿ ಗಿರೀಶ್‌ ನಂದನ್‌, ಸುಳ್ಯ ತಹಶೀಲ್ದಾರ್‌ ಅನಿತಾಲಕ್ಷ್ಮೀ, ಕಡಬ ತಹಶೀಲ್ದಾರ್‌ ಅನಂತಶಂಕರ, ಕಡಬ ಇಒ ನವೀನ್‌ ಭಂಡಾರಿ, ಎಸಿಎಫ್ ಪ್ರವೀಣ್‌ ಶೆಟ್ಟಿ, ಆರ್‌ಎಫ್ಇ ಮಂಜುನಾಥ, ಆರ್‌ಐಗಳಾದ ಕೊರಗಪ್ಪ ಹೆಗ್ಡೆ, ಅವಿನ್‌ ರಂಗತ್ತಮಲೆ, ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next